ಬಸ್ಸು, ರೈಲು ಆಯ್ತು ಇದೀಗ ವಿಮಾನ ವ್ಯವಸ್ಥೆ : ವಿದೇಶದಲ್ಲಿರುವ ಭಾರತೀಯರನ್ನು ಮತ್ತೆ ತಾಯ್ನಾಡಿಗೆ ಕರೆತರಲು ಸಿದ್ದರಾದ ಸೋನು ಸೂದ್

0

ಮುಂಬೈ : ಸೋನು ಸೂದ್.. ಈ ಹೆಸರು ಕೇಳಿದ್ರೆ ಸಾಕು ತಟ್ಟನೆ ನೆನಪಾಗುವುದು ಕೊರೊನಾ ಲಾಕ್ ಡೌನ್. ಹೌದು, ಲಾಕ್ ಡೌನ್ ವೇಳೆಯಲ್ಲಿ ಅದೆಷ್ಟೋ ಬಡವರು, ನಿರ್ಗತಿಕರು, ಅಶಕ್ತರ ಪಾಲಿಗೆ ಆಶಾಕಿರಣವಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸೋನುಸೂದ್ ಇದೀಗ ಭಾರತೀಯರನ್ನು ಕರೆತರಲು ವಿಮಾನಯಾನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

ಲಾಕ್ ಡೌನ್ ಆರಂಭವಾಗುತ್ತಿದ್ದಂತೆಯೇ ಮುಂಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಹೊರ ರಾಜ್ಯಗಳ ಕಾರ್ಮಿಕರನ್ನು, ಜನರನ್ನು ಬಸ್ಸು, ವಾಹನಗಳ ಮೂಲಕ ಅವರ ಊರುಗಳಿಗೆ ತಲುಪಿಸಿದ್ದರು. ನಂತರ ಅದೆಷ್ಟೋ ಜನರನ್ನು ತಮ್ಮದೇ ಖರ್ಚಿನಲ್ಲಿ ರೈಲಿನ ಮೂಲಕವೂ ಕಾರ್ಮಿಕರು ತಮ್ಮೂರಿಗೆ ತೆರಳಲು ಸಹಾಯಹಸ್ತವನ್ನು ಚಾಚಿದ್ದರು.

ಹಸಿದ ಹೊಟ್ಟೆಗಳಿಗೆ ತುತ್ತನ್ನು ನೀಡುವ ಕಾಯಕ ಮಾಡುವ ಮೂಲಕ ದೇಶದ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದರು. ಕೆಲಸ ಕಳೆದುಕೊಂಡು ತರಕಾರಿ ವ್ಯಾಪಾರ ಮಾಡುತ್ತಿದ್ದ ಯುವತಿಗೆ ನೌಕರಿ ನೀಡಿದ್ದರು. ಹೊಲದಲ್ಲಿ ಹೆಣ್ಣು ಮಕ್ಕಳನ್ನು ಬಳಸಿ ಉಳುಮೆ ಮಾಡುತ್ತಿದ್ದ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡಿಸಿ ಸುದ್ದಿಯಾಗಿದ್ದರು. ಹೀಗೆ ಹತ್ತಾರು ಸಮಾಜಮುಖಿ ಕಾರ್ಯದ ಮೂಲಕ ಜನರ ನೆಚ್ಚಿನ ಸ್ಟಾರ್ ಆಗಿ ಸೋನು ಸೂದ್ ಹೊರಹೊಮ್ಮಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯತೆ ಮತ್ತೊಮ್ಮೆ ಅನಾವರಣವಾಗುತ್ತಿದೆ. ಅವರಲ್ಲಿರುವ ಸಾಮಾಜಿಕ ಕಾಳಜಿಯಿಂದಾಗಿ ಫಿಲಿಫೈನ್ಸ್ ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ವಿಮಾನದ ವ್ಯವಸ್ಥೆಯನ್ನು ಮಾಡಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ನೂರಾರು ಜನರನ್ನು ಭಾರತಕ್ಕೆ ಕರೆತಂದಿರುವ ಸೋನು ಸೂದ್ ಇದೀಗ ಎರಡನೇ ಹಂತದಲ್ಲಿ ವಿಶೇಷ ವಿಮಾನದ ವ್ಯವಸ್ಥೆಯ ಮೂಲಕ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಮುಂದಾಗಿದ್ದಾರೆ.

ನಾಳೆ ಫಿಲಿಫೈನ್ಸ್ ನಿಂದ ವಿಶೇಷ ವಿಮಾನದ ಮೂಲಕ ನೂರಾರು ಭಾರತೀಯರು ತಾಯ್ನಾಡಿಗೆ ಮರಳಲಿದ್ದು, ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸೋನು ಸೂದ್ ನಿಮ್ಮ ಕುಟುಂಬದವರನ್ನ ಭೇಟಿಯಾಗೋದಕ್ಕೆ ಸಿದ್ಧರಾಗಿದ್ದೀರಿ ಅಂತಾ ನಾನು ನಂಬಿದ್ದೇನೆ ಎಂದು ಕೂಡ ಬರೆದುಕೊಂಡಿದ್ದಾರೆ.‌

Leave A Reply

Your email address will not be published.