ಆರ್‌ಟಿಇ ಎನ್‌ಇಪಿ ಗೊಂದಲ: ರಾಷ್ಟ್ರೀಯ ಶಿಕ್ಷಣ ನೀತಿ ಬದಲಾದರೂ ಯಥಾಸ್ಥಿತಿ ಇರಲಿದೆ ಆರ್‌ಟಿಇ

ಬೆಂಗಳೂರು : (RTE NEP) ರಾಜ್ಯದ ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ನೀತಿ ಅಳವಡಿಕೆಯಾಗುತ್ತಿರುವ ಬೆನ್ನಲ್ಲೇ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಗೆ ಸಂಬಂಧಿಸಿದಂತೆ ಅನೇಕ ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೊಸ ಶಿಕ್ಷಣ ವ್ಯವಸ್ಥೆಯಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿಯಲ್ಲಿ ಬದಲಾವಣೆಗಳಾಗಿವೆ ಎನ್ನುವ ಸುಳ್ಳು ಸುದ್ದಿಯಿಂದಾಗಿ ಪೋಷಕರು ಈ ಸೌಲಭ್ಯದಿಂದ ದೂರ ಉಳಿಯುತ್ತಿದ್ದಾರೆ. ಈ ಕಾರಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೂ ಕೂಡ ಆರ್‌ಟಿಇ ಮುದುವರೆಯಲಿದೆ ಎನ್ನುವ ವಿಚಾರವನ್ನು ಪೋಷಕರಿಗೆ ಮನದಟ್ಟು ಮಾಡಿಸಲು ಕೆಲವು ಮಕ್ಕಳ ಹಕ್ಕುಗಳ ಸಂಘಟನೆಗಳಿಂದ ಪ್ರಯತ್ನ ನಡೆಯುತ್ತಿದೆ.

ಅನೇಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪೋಷಕರನ್ನು ಬಿಡಲಿ ಸ್ವತಃ ಶಿಕ್ಷಕರಿಗೆ ಸ್ಪಷ್ಟನೆ ಇಲ್ಲ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೆ ಆರ್‌ಟಿಇ ಮತ್ತು ಎನ್‌ಇಪಿಗೆ ಸಂಬಂಧಿಸಿದಂತೆ ಗೊಂದಲಗಳನ್ನು ಸರಕಾರ ನಿವಾರಿಸಬೇಕು ಎಂದು ಮಕ್ಕಳ ಸಂಘಟನೆಗಳು ಒತ್ತಾಯಿಸಿದ್ದಾರೆ.

ಇನ್ನೂ ಆರ್‌ಟಿಇ ಅಡಿ ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆದು ಎಂಟನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಹೊಸದೊಂದು ಸಮಸ್ಯೆ ತಲೆದೂರಿದ್ದು, ಒಂಬತ್ತು ಮತ್ತು ಹತ್ತನೇ ತರಗತಿಗೆ ಅದೇ ಶಾಲೆಯಲ್ಲಿ ಮುಂದುವರಿಸಲು ಪೋಷಕರಿಗೆ ಆರ್ಥಿಕ ಬಿಕ್ಕಟ್ಟು ಎದುರಾಗುತ್ತಿದೆ. ಎಂಟನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲು ಸರಕಾರ ವ್ಯವಸ್ಥೆ ರೂಪಿಸಿದ್ದು, ಪ್ರತಿಷ್ಠಿತ ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಒಗ್ಗಿರುವ ಮಕ್ಕಳು ಒಂದೇ ಸಮನೇ ಸರಕಾರಿ, ಅನುದಾನಿತ ಶಾಲೆಗಳ ಸ್ಥಿತಿ ಗತಿಯನ್ನು ಒಪ್ಪುವುದಿಲ್ಲ. ಹೀಗಾಗಿ ಸರಕಾರ ಈ ವ್ಯವಸ್ಥೆಯನ್ನು ಹತ್ತನೇ ತರಗತಿಯವರೆಗೆ ವಿಸ್ತರಿಸಬೇಕೆಂಬ ಒತ್ತಾಯ ಕೆಲ ಪೋಷಕರದ್ದು, ಜೊತೆಗೆ ಆರ್‌ಟಿಇ ಅಡಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಒದಗಿಸಬೇಕೆಂದು ಮಕ್ಕಳ ಹಕ್ಕುಗಳ ಸಂಘಟನೆಗಳು ಸರಕಾರಕ್ಕೆ ಮನವಿ ಮಾಡಿವೆ.

ಇದನ್ನೂ ಓದಿ : NCERT 12 ನೇ ತರಗತಿ ಇತಿಹಾಸ ಪಠ್ಯಪುಸ್ತಕದಲ್ಲಿ ಮಹತ್ತರ ಬದಲಾವಣೆ

ಮಾರ್ಚ್‌ 20 ರಿಂದ ಏಪ್ರಿಲ್‌ 20 ರವರೆಗೆ ಆರ್‌ಟಿಇ ಸೀಟಿಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿದ್ದು, ವಾಸ ಸ್ಥಳದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿ ಸರಕಾರಿ ಅನುದಾನಿತ ಶಾಲೆಗಳಿದ್ದರೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಮಾ. 21 ರಿಂದ ಏ. 21 ರವರೆಗೆ ಅರ್ಜಿ ಪರಿಶೀಲನೆಗೆ ಅವಕಾಶವಿದ್ದು, ಏ. 24 ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ನಂತರ ಏ.27 ರಿಂದ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಾರಂಭವಾಗಲಿದ್ದು, ಏ.28 ರಿಂದ ಮೇ 8 ರ ವರೆಗೆ ಶಾಲೆಗಳಲ್ಲಿ ದಾಖಲಾತಿ ನಡೆಯಲಿದೆ. ಮತ್ತೆ ಮೇ 16 ರಿಂದ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಮೇ 17 ರಿಂದ ಮೇ 25 ರವೆರೆಗೆ ಎರಡನೇ ಸುತ್ತಿನ ಸೀಟುಗಳ ದಾಖಲಾತಿ ನಡೆಯಲಿದೆ.

RTE NEP : RTE NEP Confusion: Status quo will remain even if National Education Policy changes RTE

Comments are closed.