ಸೋಮವಾರ, ಏಪ್ರಿಲ್ 28, 2025
Homeeducationರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೊನಾ ಅಬ್ಬರ : ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಶಿಕ್ಷಕರು ಬಲಿ !

ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೊನಾ ಅಬ್ಬರ : ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಶಿಕ್ಷಕರು ಬಲಿ !

- Advertisement -

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಒಂದೆಡೆ ಲಾಕ್ ಡೌನ್ ಆದೇಶ ಜಾರಿಗೆ ಕೂಗು ಕೇಳಿಬರುತ್ತಿದೆ. ಇನ್ನೊಂದೆಡೆ ಸರಕಾರ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡ್ತಿದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರಿಂದಾಗಿ ಶಿಕ್ಷಕರು ಕಂಗಾಲಾಗಿದ್ದು, ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಶಿಕ್ಷಕರು ಸಚಿವರನ್ನು ಆಗ್ರಹಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಸಾರ್ವಜನಿಕವಾಗಿಯೂ ಸೋಂಕು ಹರಡುತ್ತಿದೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ರಾಜ್ಯ ಸರಕಾರ ಸರಕಾರಿ ಕಚೇರಿಗಳನ್ನು 5 ದಿನಕ್ಕೆ ಸೀಮಿತಗೊಳಿಸಿದೆ. ಕಾಲೇಜು ಶಿಕ್ಷಣ ಇಲಾಖೆ ಪದವಿ ತರಗತಿಗಳಿಗೆ ರಜೆಯನ್ನು ವಿಸ್ತರಣೆ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಶೈಕ್ಷಣಿಕ ಸಂಸ್ಥೆಗಳಿಗೆ ರಜೆಯನ್ನು ನೀಡಲಾಗಿದ್ದು, ಶಾಲೆಯನ್ನು ತೆರೆಯದಂತೆ ಆದೇಶಿಸಿದೆ. ಆದ್ರೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಆದೇಶಿಸಿದ್ದು ಜುಲೈ 1ರಿಂದ 31ರ ವರೆಗೆ ಶಿಕ್ಷಕರು ಯಾವೆಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ಕುರಿತು ಆದೇಶವೊಂದನ್ನು ಹೊರಡಿಸಲಾಗಿದೆ. ಶಿಕ್ಷಣ ಇಲಾಖೆಯ ಆದೇಶ ಇದೀಗ ಶಿಕ್ಷಕ ಸಮೂಹವನ್ನೇ ಕೆರಳಿಸುವಂತೆ ಮಾಡಿದೆ.

ಕಾಟಾಚಾರಕ್ಕೆ ಆಯುಕ್ತರ ಆದೇಶ !
ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚಾಗಿದ್ದರೂ ಕೂಡ ಶಿಕ್ಷಕರು ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯವನ್ನು ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಶಿಕ್ಷಕರ ಮೇಲೆಯೇ ಸವಾರಿ ಮಾಡುತ್ತಿದ್ದಾಯೆಯೇ ಅನ್ನುವ ಅನುಮಾನ ಮೂಡುತ್ತಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಶಾಲೆಗಳು ಆರಂಭವಾಗಿಲ್ಲ. ಜೊತೆಗೆ ಶಾಲೆಯ ಆರಂಭದ ಕುರಿತು ಯಾವುದೇ ಸ್ಪಷ್ಟನೆಯಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕರು ತಮಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಅವಕಾಶ ಕಲ್ಪಿಸುವಂತೆ ಈ ಹಿಂದೆಯೇ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಅವರು ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಶಾಲಾರಂಭಕ್ಕೆ ಒಂದು ವಾರದ ಮೊದಲು ಮಾತ್ರವೇ ಶಿಕ್ಷಕರನ್ನು ಶಾಲೆಗೆ ಬರುವಂತೆ ಸೂಚಿಸಬೇಕು. ಶಾಲೆಯಲ್ಲಿ ಶಿಕ್ಷಕರಿಗೆ ಯಾವುದೇ ಕೆಲಸ ಕಾರ್ಯಗಳು ಇಲ್ಲದೇ ಇರುವುದರಿಂದ ರಜೆಯನ್ನು ಘೋಷಿಸುವಂತೆ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶವೊಂದನ್ನು ಹೊರಡಿಸಿದ್ದು, ಜುಲೈ 1 ರಿಂದ ಜುಲೈ 31ರ ವರೆಗೆ ಶಿಕ್ಷಕರು ಯಾವೆಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಸೂಚಿಸಿದ್ದಾರೆ. ದುರಂತವೆಂದ್ರೆ ಶಿಕ್ಷಣ ಇಲಾಖೆ ಈ ಹಿಂದೆ ಎರಡು ಬಾರಿ ಹೊರಡಿಸಿದ್ದ ಆದೇಶದಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿ ಮತ್ತೆ ಹಳೆಯ ಆದೇಶವನ್ನೇ ಹೊರಡಿಸಿದೆ. ಶಿಕ್ಷಕರನ್ನು ಹೇಗಾದ್ರೂ ಮಾಡಿ ಶಾಲೆಗಳಲ್ಲಿಯೇ ಕಟ್ಟಿ ಹಾಕುವ ಸಲುವಾಗಿಯೇ ಆಯಕ್ತರು ಈ ಆದೇಶ ಹೊರಡಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಇನ್ನು ಆದೇಶದಲ್ಲಿ ವೇಳಾಪಟ್ಟಿ, ಶಾಲಾರಂಭಕ್ಕೆ ಸಿದ್ದತೆ, ಶಾಲಾಭಿವೃದ್ದಿಯ ಕುರಿತು ಪೋಷಕರ ಸಭೆ, ಶಾಲಾವರಣ, ಶೌಚಾಲಯ ಸ್ವಚ್ಚಗೊಳಿಸುವುದದು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಶಾಲೆ ಆರಂಭವೇ ಅನಿಶ್ಚಿತತೆಯಲ್ಲಿರುವಾಗ ಶಾಲಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಿ ಅನ್ನುವುದು ನಿಜಕ್ಕೂ ಹಾಸ್ಯಾಸ್ಪದ. ಇನ್ನು ಕೊರೊನಾ ಹರಡುವ ಸಂದರ್ಭದಲ್ಲಿ ಪೋಷಕರ ಸಭೆ ನಡೆಸಲು ಸೂಚಿಸಿರುವುದರಿಂದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಕೊರೊನಾ ಹರಡುವಂತೆ ಮಾಡುತ್ತಿದ್ದಾರಾ ಅನ್ನುವ ಅನುಮಾನವೂ ಮೂಡುತ್ತಿದೆ.

ವರ್ಕ್ ಫ್ರಮ್ ಹೋಮ್ ಅವಕಾಶ ಕೊಡಿ : ಸಚಿವರಿಗೆ ಶಿಕ್ಷಕರ ಮನವಿ

ಈಗಾಗಲೇ ಕೋವಿಡ್ -19 ಅತ್ಯಂತ ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರ ಶೇ.50 ರಷ್ಟು ಸಿಬ್ಬಂದಿಗಳು ಪಾಳಿಪದ್ದತಿಯಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಿದೆ. ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ವಿನಾಯಿತಿ ನೀಡಿದೆ. ಸರಕಾರಿ ನೌಕರರು ವಾರದಲ್ಲಿ 5 ದಿನಗಳ ಕಾಲ ಮಾತ್ರವೇ ಸೇವೆ ಸಲ್ಲಿಸುವಂತೆ ಹೇಳಿದೆ. ಕೇಂದ್ರ ಸರಕಾರವೂ ಶೈಕ್ಷಣಿಕ ಸಂಸ್ಥೆ ತೆರೆಯದಂತೆ ಸೂಚಿಸಿದೆ. ಆದರೆ ಶಿಕ್ಷಕರು ಮಾತ್ರ ಶಾಲೆಗೆ ಬರುವಂತೆ ಹೇಳುವುದು ಸರಿಯೇ ಎಂದು ಶಿಕ್ಷಕರ ಸಂಘ ಪ್ರಶ್ನಿಸಿದೆ.

ಶಾಲಾರಂಭದ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವಾಗ ವಾರ್ಷಿಕ ಕ್ರಿಯಾ ಯೋಜನೆ, ವೇಳಾ ಪಟ್ಟಿ ತಯಾರಿಕೆ ಮಾಡುವುದು ಹೇಗೆ ? ಶಿಕ್ಷಕರಿಗೆ ಕೆಲಸವಿಲ್ಲದಿದ್ದರೂ ಶಾಲೆಗೆ ಕಳುಹಿಸಬೇಕೆಂಬ ಹಠಕ್ಕೆ ಬೀಳುವುದು ನ್ಯಾಯವೇ ? ಸರಕಾರ ಕೆಲಸವಿದ್ದಾಗ ಬೇರೆ ಕೆಲಸಕ್ಕೆ ಶಿಕ್ಷಕರನ್ನು ಬಳಸಿಕೊಂಡಿಲ್ಲವೇ ? ಸರಕಾರದ ಎಲ್ಲಾ ಚಟುವಟಿಕೆಗಳಿಗೂ ಶಿಕ್ಷಕರು ಸಹಕಾರ ನೀಡಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಸ್ಸುಗಳೇ ಇಲ್ಲದಿದ್ದರೂ ಶಿಕ್ಷಕರು ಶಾಲೆಗೆ ಹಾಜರಾಗುತ್ತಿದ್ದಾರೆ. ಶಿಕ್ಷಕರನ್ನು ಕೊರೊನಾ ಸೋಂಕಿಗೆ ಬಲಿಕೊಡುವುದು ಸರಿಯಾದ ನಿರ್ಧಾರವಲ್ಲ. ಹೀಗಾಗಿ ಆದೇಶವನ್ನು ಪುನರ್ ಪರಿಶೀಲಿಸಿ, ಶಿಕ್ಷಕರು ಮನೆಯಿಂದಲೇ ಕಾರ್ಯನಿರ್ವವಹಿಸಲು ಅವಕಾಶ ಕಲ್ಪಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಒತ್ತಾಯಿಸಿದ್ದು ಈ ಕುರಿತು ಮನವಿಯನ್ನೂ ಸಲ್ಲಿಸಿದೆ.

ಕಾಲೇಜು ಉಪನ್ಯಾಸಕರಿಗೂ ಶಿಕ್ಷಕರಿಗೂ ವೇತನ ತಾರತಮ್ಯವಿದೆ. ಇದೀಗ ರಜೆಯ ವಿಚಾರದಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಶಿಕ್ಷಕರಿಗೆ ಕನಿಷ್ಠ ಆರೋಗ್ಯ ಸೌಲಭ್ಯವಿಲ್ಲ. ಕೊರೊನಾ ವಿಮಾ ವ್ಯಾಪ್ತಿಗೆ ಶಿಕ್ಷಕರನ್ನು ಒಳಪಡಿಸಿಲ್ಲ. ಯಾವುದೇ ಭದ್ರತೆಯನ್ನು ನೀಡದೇ ಕೇವಲ ಶಿಕ್ಷಕರನ್ನು ಅನಗತ್ಯವಾಗಿ ಶಾಲೆಗೆ ಕರೆಯಿಸುವುದು ಎಷ್ಟು ಸರಿ. ಈ ನಿಟ್ಟಿನಲ್ಲಿ ದಕ್ಷ ಸಚಿವರೆನಿಸಿಕೊಂಡಿರುವ ಸುರೇಶ್ ಕುಮಾರ್ ಸೂಕ್ತಕ್ರಮಕೈಗೊಳ್ಳಬೇಕಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular