ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭವೇ ಅನಿಶ್ವಿತತೆಯಿಂದ ಕೂಡಿದೆ. ಕೊರೊನಾ ನಿಯಂತ್ರಣಕ್ಕೆ ಬಾರದ ಹೊರತು ಶಾಲೆಗಳು ಆರಂಭವಾಗುವುದು ಕಷ್ಟಸಾಧ್ಯ. ಆದ್ರೂ ರಾಜ್ಯ ಸರಕಾರ ಸಾಧಕ, ಬಾಧಕಗಳನ್ನು ಚರ್ಚಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 120 ದಿನಗಳ ಕಾಲ ಶಾಲೆಗಳನ್ನು ನಡೆಸಲು ಚಿಂತನೆ ನಡೆಸಿದ್ದು, ನವೆಂಬರ್ ತಿಂಗಳಿನಿಂದ ಶಾಲೆಗಳು ಪುನರಾರಂಭವಾಗುವ ಸಾಧ್ಯತೆಯಿದೆ. ಇದಕ್ಕೆ ಪೂರಕ ವೆಂಬಂತೆ ಪಠ್ಯಕ್ರಮದಲ್ಲಿಯೂ ಶಿಕ್ಷಣ ಇಲಾಖೆ ಕಡಿತಗೊಳಿಸಿದೆ.


ಕೊರೊನಾ ವೈರಸ್ ಸೋಂಕಿನ ತೀವ್ರತೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುವುದೇ ಅನುಮಾನ. ರಾಜ್ಯ ಸರಕಾರ ಈ ಹಿಂದೆ ಅಗಸ್ಟ್ ಅಥವಾ ಸಪ್ಟೆಂಬರ್ ತಿಂಗಳಿನಿಂದಲೇ ಶಾಲೆಗಳನ್ನು ತೆರೆಯಲು ಚಿಂತನೆಯನ್ನು ನಡೆಸಿತ್ತು. ಆದ್ರೆ ಕೊರೊನಾ ಸೋಂಕು ಹರಡುವಿಕೆಯನ್ನು ಗಮಿಸಿದ್ರೆ ಇದು ಕಷ್ಟಸಾಧ್ಯ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಬಂದ್ರೆ ನವೆಂಬರ್ ತಿಂಗಳಿನಿಂದ ಶಾಲೆಗಳನ್ನು ತೆರೆಯಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ.

ಶೈಕ್ಷಣಿಕ ವರ್ಷ ವಿಳಂಬವಾಗುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ಕಡಿತಗೊಳಿಸಲು ಶೈಕ್ಷಣಿಕ ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಸಮಿತಿ ಈಗಾಗಳೇ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಪ್ರಮುಖವಾಗಿ ಪಠ್ಯ ಕಡಿತದ ಕುರಿತು ಸಮಿತಿಯು ಮೂರು ಸಾಧ್ಯತೆಗಳನ್ನು ಪರಿಗಣಿಸಿದ್ದು, ಶೇ.10, 20 ಮತ್ತು ಶೇ.30ರಂತೆ ಪಠ್ಯಕ್ರಮಗಳಲ್ಲಿ ಕಡಿತ ಮಾಡಲಾಗಿದೆ. ಅಲ್ಲದೇ ಮೂರನೇ ಸಾಧ್ಯತೆಯ ಪ್ರಕಾರ ಕೇವಲ 120 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆ ನೀಡಲು ನಿರ್ಧರಿಸಲಾಗಿದೆ.

2020-21ನೇ ಸಾಲಿನಲ್ಲಿ ಕೇವಲ 120 ದಿನಗಳ ಕಾಲ ಮಾತ್ರ ಶಾಲೆಗಳನ್ನು ನಡೆಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಲಹಾ ಸಮಿತಿ ಈಗಾಗಲೇ 1 ರಿಂದ 10ನೇ ತರಗತಿ ವರೆಗಿನ ಪಠ್ಯಕ್ರಮಗಳಲ್ಲಿ ಕಡಿತ ಮಾಡಿದೆ. ಶೈಕ್ಷಣಿಕ ಅವಧಿಯ ಕಡಿತದ ಹಿನ್ನೆಲೆಯಲ್ಲಿ ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿಯೂ ಶಾಲೆಗಳನ್ನು ಪಾಠಬೋಧನೆ ಮಾಡುವುದರಿಂದ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೇ ಶಿಕ್ಷಕರಿಗೂ ಕೂಡ ಪಾಠ ಬೋಧನೆ ಹೊರೆಯಾಗಲಿದೆ.

ಈ ನಿಟ್ಟಿನಲ್ಲಿ ಸಮಿತಿಯು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಕೊರತೆಯಾಗದಂತೆ ಚಟುವಟಿಕೆಗಳನ್ನು ಮಿತಿಗೊಳಿಸಿದೆ. ಸಾಲದಕ್ಕೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಶಾಲೆಗಳಲ್ಲಿ ಕೈಗೊಳ್ಳಲೇ ಬೇಕಾದ ಅನಿವಾರ್ಯತೆಯಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಪಠ್ಯಕ್ರಮವನ್ನು ಕಡಿತಗೊಳಿಸಲಾಗಿದೆ.

ಹಿಂದಿನ ತರಗತಿಗಳಲ್ಲಿ ಅಭ್ಯಾಸ ಮಾಡಿರುವ ವಿಷಯಗಳು ಪುನರಾವರ್ತನೆಯಾಗದಂತೆ ಗಮನಹರಿಸಲಾಗಿದೆ. ಪಠ್ಯದಲ್ಲಿ ಅನಗತ್ಯೆವೆನಿಸುವ ಪಾಠ ಹಾಗೂ ಪದ್ಯಗಳನ್ನು ಕಡಿತಗೊಳಿಸಲಾಗಿದೆ. ಪಾಠ ಕಡಿತದ ಕುರಿತು ಸಮಿತಿಯು ಸೂಕ್ತ ಕಾರಣವನ್ನೂ ನೀಡಿದೆ. ಅಲ್ಲದೇ ನಿಗದಿತ ಅವಧಿಯಲ್ಲಿಯೇ ಪಾಠಗಳನ್ನು ಮುಕ್ತಾಯಗೊಳಿಸುವಂತೆಯೂ ಶಿಕ್ಷಕರಿಗೆ ಸೂಚನೆಯನ್ನೂ ನೀಡಲಾಗಿದೆ.

ಸಾಮಾನ್ಯವಾಗಿ 180 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಈಗಾಗಲೇ ಎರಡು ತಿಂಗಳು ಕಡಿತವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಶಾಲೆ ಆರಂಭಿಸುವುದು ಕೂಡ ಅಸಾಧ್ಯ. ಹೀಗಾಗಿ ಅರ್ಧ ವರ್ಷದ ಶೈಕ್ಷಣಿಕ ವರ್ಷವನ್ನು ಕಡಿತಗೊಳಿಸಿ, ಉಳಿದರ್ಧ ವರ್ಷ ಶೈಕ್ಷಣಿಕ ಚಟುವಟಿಕೆ ನಡೆಯುವ ಸಾಧ್ಯತೆಯಿದೆ. ಈ ಅಂಶಗಳನ್ನು ಲೆಕ್ಕಾಚಾರ ಹಾಕಿ 120 ದಿನಗಳಿಗೆ ಶೈಕ್ಷಣಿಕ ವರ್ಷವನ್ನು ನಿಗದಿ ಪಡಿಸಲಾಗಿದೆ. ಆದರೆ ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಮಾತ್ರ ಶಾಲೆಗಳು ಪುನರಾರಂಭವಾಗಲು ಸಾಧ್ಯ.
