ಧಾರವಾಡ : ರಾಜ್ಯದಾದ್ಯಂತ ಶಾಲೆ ಆರಂಭಗೊಳ್ಳದಿದ್ದರೂ ಶಿಕ್ಷಕರು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನೊಂದೆಡೆ ಎಸ್ಎಸ್ಎಲ್ ಸಿ ಪರೀಕ್ಷೆ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಈ ಹೊತ್ತಲ್ಲೇ ಆತಂಕ ಶುರುವಾಗಿದ್ದು, ಓರ್ವ ಶಿಕ್ಷಕಿಯಿಂದ 7 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ಹರಡಿದೆ.

ಈ ಘಟನೆ ನಡೆದಿರುವುದು ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲೋನಿಯಲ್ಲಿ. ಕೊರೊನಾ ಸೋಂಕಿತ ಮಹಿಳೆ ನಗರದ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜ್ವರ, ಶೀತ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಶಿಕ್ಷಕಿಯನ್ನು ಜೂನ್ 11ರಂದು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಜೂನ್ 12ರಂದು ಕೈ ಸೇರಿದ ವರದಿಯಲ್ಲಿ ಶಿಕ್ಷಕಿಗೆ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೇ ಪತಿಯಲ್ಲಿಯೂ ಶಂಕಿತ ಲಕ್ಷಣ ಕಾಣಿಸಿಕೊಂಡಿತ್ತು. ಅಲ್ಲದೇ ತಪಾಸಣೆಯ ವೇಳೆಯಲ್ಲಿ ಶಿಕ್ಷಕಿಯ 34 ವರ್ಷದ ಪತಿಗೂ ಸೋಂಕು ಖಚಿತವಾಗಿದೆ.

ಈ ನಡುವಲ್ಲೇ ಶಿಕ್ಷಕಿ ಸರಕಾರದ ಆದೇಶದಂತೆ ಜೂನ್ 8ರಂದು ಶಾಲೆಗೆ ಹೋಗಿ ಬಂದಿದ್ದಾರೆ. ಹೀಗಾಗಿ ಶಿಕ್ಷಕಿಯ ಸಂಪರ್ಕಕ್ಕೆ ಬಂದಿದ್ದ 20 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಶಿಕ್ಷಕಿ ಕೆಲಸ ಮಾಡುತ್ತಿದ್ದ ಶಾಲೆಯ 7 ಮಂದಿ ಶಿಕ್ಷಕರಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.

ಶಿಕ್ಷಕಿಗೆ ಸೋಂಕು ಎಲ್ಲಿಂದ ಹರಡಿದೆ ಅನ್ನುವ ಕುರಿತು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಅಲ್ಲದೇ 7 ಮಂದಿ ಶಿಕ್ಷಕರ ಸಂಪರ್ಕದಲ್ಲಿದ್ದವರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯ ಸರಕಾರ ಶಾಲೆಗಳಿಗೆ ಶಿಕ್ಷಕರನ್ನು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದು ಶಿಕ್ಷಕರು ಮಕ್ಕಳಿಲ್ಲದಿದ್ದರು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ.

ಈ ನಡುವಲ್ಲೇ ದಕ್ಷಿಣ ಕನ್ನಡದಲ್ಲಿ ಶಿಕ್ಷಕರಿಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಧಾರವಾಡದಲ್ಲೀಗ 8 ಮಂದಿ ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಶಿಕ್ಷಕರು ಭಯದಲ್ಲಿಯೇ ಶಾಲೆಗೆ ಹಾಜರಾಗುವ ಸ್ಥಿತಿ ಎದುರಾಗಿದೆ. ಈ ನಡುವಲ್ಲೇ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭಗೊಳ್ಳುತ್ತಿರುವ ಹೊತ್ತಲ್ಲೇ ಶಿಕ್ಷಕರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕವನ್ನು ಮೂಡಿಸಿದೆ.