ಕೊರೊನಾ ದೇವಿಗೆ ನಿತ್ಯವೂ ಪೂಜೆ : ಕೊಲ್ಲಂನಲ್ಲೊಂದು ವಿಚಿತ್ರ ಆಚರಣೆ !

0

ಕೊಲ್ಲಂ : ಕೊರೊನಾ ವೈರಸ್ ಮಹಾಮಾರಿ ವಿಶ್ವದಾದ್ಯಂತ ಸಂಕಷ್ಟವನ್ನೇ ತಂದೊಡ್ಡಿದೆ. ಕೊರೊನಾ ಆತಂಕದಿಂದಾಗಿ ಜನ ನಿದ್ದೆಯಲ್ಲಿಯೂ ಬೆಚ್ಚಿ ಬೀಳುತ್ತಿದ್ದಾರೆ. ಆದರೆ ಕೇರಳ ವ್ಯಕ್ತಿಯೋರ್ವರು ಮಾರಣಾಂತಿಕ ವೈರಸ್ ನ್ನು ದೇವತೆಯಾಗಿ ಪೂಜಿಸುತ್ತಿದ್ದಾರೆ.

ಹೌದು. ಹೀಗೆ ಮನೆಯಲ್ಲಿಯೇ ಕೊರೊನಾ ವೈರಸ್ ಮೂರ್ತಿಯನ್ನು ತಯಾರಿಸಿ ಪೂಜೆ ಮಾಡುತ್ತಿರುವ ಇವರ ಹೆಸರು ಅನಿಲನ್. ಕೇರಳ ರಾಜ್ಯದ ಕೊಲ್ಲಂನ ಕಡಕ್ಕಲ್ ನಿವಾಸಿ. ಕೊರೊನಾ ವೈರಸ್ ಸೋಂಕಿನಿಂದ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಂಕಷ್ಟದಲ್ಲಿದ್ದಾರೆ. ಅಲ್ಲದೇ ದೇಶದಲ್ಲಿಯೂ ಮೂರು ಲಕ್ಷಕ್ಕೂ ಅಧಿಕ ಮಂದಿಗೆ ವೈರಸ್ ಕಾಣಿಸಿಕೊಂಡಿದೆ. ಈ ನಡುವಲ್ಲೇ ಅನಿಲನ್ ತನ್ನ ಮನೆಯ ದೇವರ ಕೋಣೆಯಲ್ಲಿ ಕೊರೊನಾ ವೈರಸ್ ಪ್ರತಿಕೃತಿಯನ್ನು ರಚಿಸಿದ್ದಾರೆ. ಕೊರೊನಾ ಪ್ರತಿಕೃತಿಯನ್ನು ದೇವತೆಯ ಪ್ರತಿರೂಪದಲ್ಲಿಯೂ ಆರಾಧನೆಯನ್ನು ಮಾಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದಲೂ ಅನಿಲನ್ ಪೂಜೆ ಸಲ್ಲಿಸುತ್ತಾ ಜನರನ್ನು ಅಪಾಯದಿಂದ ಪಾರುಮಾಡುವಂತೆ ಕೊರೊನಾ ದೇವಿಗೆ ಮೊರೆಯಿಡುತ್ತಿದ್ದಾರೆ.

ಕೊರೊನಾ ದೇವಿಯ ಪೂಜೆಗೆ ಇತರರಿಗೆ ಅವಕಾಶವನ್ನು ನೀಡುವುದಿಲ್ಲ. ಅಲ್ಲದೇ ಕೊರೊನಾ ದೇವಿಯ ಪೂಜೆಗೆ ಬರುವ ಭಕ್ತರಿಂದಲೂ ಯಾವುದೇ ರೀತಿಯಲ್ಲೂ ಹಣವನ್ನ ಅವರು ಪಡೆದುಕೊಳ್ಳುವುದಿಲ್ಲ. ದೇಶದಲ್ಲಿ ಒಟ್ಟು 33 ಕೋಟಿ ಹಿಂದೂ ದೇವರಿದ್ದಾರೆ. ಯಾರಿಗೆ ಯಾವ ದೇವರು ಇಷ್ಟವೋ ಅವರು ಆ ದೇವರನ್ನು ಪೂಜಿಸುತ್ತಾರೆ. ನನಗೆ ಕೊರೊನಾ ದೇವರ ಮೇಲೆ ಪ್ರೀತಿಯಿದೆ. ಹೀಗಾಗಿಯೇ ಕೊರೊನಾ ದೇವಿಯನ್ನು ಮನೆಯಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದೇನೆ ಎನ್ನುತ್ತಾರೆ ಅನಿಲನ್.

ನಾನು ಇದೀಗ ವೈರಸ್ ನ್ನು ದೇವಿಯಂತೆ ಪೂಜಿಸುತ್ತಿದ್ದೇನೆ. ಕೊರೊನಾ ವಿರುದ್ದ ಹೋರಾಟ ಮಾಡುತ್ತಿರುವ ಆರೋಗ್ಯ ಸಿಬ್ಬಂಧಿ, ಪೊಲೀಸ್ ಸಿಬ್ಬಂಧಿ, ವಿಜ್ಞಾನಿಗಳು ಸೇರಿದಂತೆ ಕೊರೊನಾ ವಾರಿಯರ್ಸ್ ಗಳ ಪರವಾಗಿ ನಾನು ಬೇಡಿಕೊಳ್ಳುತ್ತಿದ್ದೇನೆ. ಈ ಕುರಿತು ಹಲವರು ನನಗೆ ಅಪಹಾಸ್ಯವನ್ನು ಮಾಡುತ್ತಿದ್ದಾರೆ ಆದರೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ.

ಕಡಕ್ಕಲ್ ನ ಅನಿಲನ್ ಕಾರ್ಯ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಟ್ರೋಲ್ ಆಗುತ್ತಿದೆ. ಶೈಕ್ಷಣಿಕವಾಗಿ ಅಭಿವೃದ್ದಿಯನ್ನು ಹೊಂದಿದ್ದರೂ ಕೂಡ ಕುರುಡು ಆಚರಣೆಗಳು ಇಂದಿಗೂ ಜಾರಿಯಲ್ಲಿವೇ ಅಂತಹವುಗಳ ಸಾಲಿಗೆ ಇದೀಗ ಕೊರೊನಾ ದೇವಿಯು ಸೇರ್ಪಡೆಯಾಗಿದ್ದಾಳೆ. ಕೇವಲ ಕೇರಳದ ಅನಿಲನ್ ಮಾತ್ರವಲ್ಲ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಲದ ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸುವಂತೆ ಕೊರೊನಾ ದೇವಿಯಾಗಿ ಪೂಜಿಸುತ್ತಿದ್ದಾರೆ.

Leave A Reply

Your email address will not be published.