ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅನ್ ಲಾಕ್ 4.0 ಮಾರ್ಗಸೂಚಿಯನ್ನೂ ಹೊರಡಿಸಿದೆ. ಈ ನಡುವಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಂದ್ರ ಸರಕಾರ ಸಮ್ಮತಿ ಕೊಟ್ರೆ ರಾಜ್ಯದಲ್ಲಿಯೂ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ಬಾರಿ ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿಯೇ ಶೈಕ್ಷಣಿಕ ವರ್ಷ ಸಾಕಷ್ಟು ವಿಳಂಭವಾಗಿದೆ. ಕೊರೊನಾ ಆತಂಕದ ನಡುವಲ್ಲಿಯೂ ಆನ್ಲೈನ್ ಮೂಲಕ ಮಕ್ಕಳಿಗೆ ಮನೆ ಪಾಠವನ್ನು ಹೇಳಿಕೊಡ ಲಾಗುತ್ತಿದೆ.. ಪ್ರತೀ ಶನಿವಾರ ಸೇರಿದಂತೆ ಒಟ್ಟು 160 ದಿನಗಳು ಸಿಕ್ಕರೂ ಕೂಡ ವಿದ್ಯಾರ್ಥಿಗಳಿಗೆ ಪಾಠ ಕಲಿಸಬಹುದೆಂದು ಎಂದಿದ್ದಾರೆ.

ಕೇಂದ್ರ ಸರಕಾರ ಸಪ್ಟೆಂಬರ್ ಅಂತ್ಯದ ವರೆಗೂ ಶಾಲೆಗಳನ್ನು ಯಾವುದೇ ಕಾರಣಕ್ಕೂ ತೆರೆಯುವುದಿಲ್ಲ ಎಂದಿದೆ. ಅಲ್ಲದೇ ಸುರೇಶ್ ಕುಮಾರ್ ಕೂಡ ಕೆಲ ದಿನಗಳ ಹಿಂದೆ ಶಾಲೆಗಳನ್ನು ಆರಂಭಿಸಲು ಆತುರವಿಲ್ಲ ಎಂದಿದ್ದರು. ಆದ್ರೀಗ ಸಚಿವರ ಹೇಳಿಕೆ ಹಲವು ಗೊಂದಲಗಳಿಗೆ ಕಾರಣವಾಗಿದೆ.

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ದಿನದಿಂದಲೂ ಶಾಲಾರಂಭದ ಕುರಿತು ಸಚಿವ ಸುರೇಶ್ ಕುಮಾರ್ ಅವರಾಗಲಿ, ಶಿಕ್ಷಣ ಇಲಾಖೆಯಾಗಲಿ ಯಾವುದೇ ಸ್ಪಷ್ಟ ನಿರ್ಧಾರವನ್ನು ಕೈಗೊಂಡಿಲ್ಲ. ಯಾವಾಗ ಶಾಲೆ ಆರಂಭವಾಗುತ್ತೆ ಅನ್ನೋದಕ್ಕೂ ಉತ್ತರವಿಲ್ಲ.

ಇದರಿಂದಾಗಿ ಶಿಕ್ಷಕರು, ಪೋಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಸುರೇಶ್ ಕುಮಾರ್ ಅವರು ಕೇಂದ್ರ ಸರಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಅಂತಾ ಹೇಳುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.