ಬೆಂಗಳೂರು : ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಪರೀಕ್ಷಾ ಮಂಡಳಿ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳಲಿದೆ.

ಜೂನ್ 25ರಿಂದ ಜುಲೈ 4ರವರೆಗೆ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿದ್ದ ಪರೀಕ್ಷೆಯು ಕೋವಿಡ್-19 ಸೋಂಕು ಕಾರಣದಿಂದ ಮುಂದೂಡಲಾಗಿತ್ತು. ನಂತರ ಪರ ವಿರೋಧ ಚರ್ಚೆಯ ನಡುವೆ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಜೂನ್ 25ರಿಂದ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ, ಕೊಠಡಿ ಪ್ರವೇಶಕ್ಕೆ ಮುನ್ನ ಥರ್ಮಲ್ ಟೆಸ್ಟ್ ನಡೆಸಿ, ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯ ಹಾಗೂ ಆರೋಗ್ಯ ಸಮಸ್ಯೆಯಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ಹೊರರಾಜ್ಯದ 500ಕ್ಕೂ ಅಧಿಕ ಮಕ್ಕಳಿಗೆ ಗಡಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯದ ಸುಮಾರು ಎರಡು ಸಾವಿರಕ್ಕೂ ಅಧಿಕ ಪರೀಕ್ಷಾ ಕೇಂದ್ರದಲ್ಲಿ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ವಿದ್ಯಾರ್ಥಿಗಳ ಫಲಿತಾಂಶ ನಾಳೆ ಹೊರಬೀಳಲಿದೆ. ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ karresults.nic.in ನಿಂದ ಪಡೆಯ ಬಹುದಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶವನ್ನು ಕಳುಹಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ.