ಜೀವದ ಹಂಗು ತೊರೆದು ನೆರೆಯಲ್ಲೂ ವಿದ್ಯುತ್ ಸಂಪರ್ಕ ಸರಿಪಡಿಸಿದ ಮೆಸ್ಕಾಂ ಸಿಬ್ಬಂದಿ !

0

ಬ್ರಹ್ಮಾವರ : ಮನೆಯಲ್ಲಿ ವಿದ್ಯುತ್ ಸಂಪರ್ಕ‌ ಕಡಿತಗೊಂಡ್ರೆ ಸಾಕು ಮೆಸ್ಕಾಂ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುವವರೇ‌ ಹೆಚ್ಚು. ಆದ್ರೆ ನಮಗೆ ವಿದ್ಯುತ್ ಪೂರೈಸಲು ಮೆಸ್ಕಾಂ ಸಿಬ್ಬಂದಿ ಎಷ್ಟೆಲ್ಲಾ ರಿಸ್ಕ್ ತೆಗೆದುಕೊಳ್ತಾರೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್.

ಹೌದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೆಣ್ಣೆಕುದ್ರು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಣ್ಣೆಕುದ್ರು ಪರಿಸರದಲ್ಲಿ ನೆರೆಹಾವಳಿ ಉಂಟಾಗಿತ್ತು. ಧಾರಕಾರ ಮಳೆಯ ನಡುವಲ್ಲೇ ವಿದ್ಯುತ್ ಸಂಪರ್ಕವಿಲ್ಲದೇ ಹೇಗೆ ಇರುವುದು ಅನ್ನುವಾಗಲೇ ಬ್ರಹ್ಮಾವರ ಮೆಸ್ಕಾಂ ಕಚೇರಿಯ ಸಿಬ್ಬಂದಿಗಳಾದ ಶ್ರೀಧರ ಬಡಿಗೇರ ಹಾಗೂ ಸಂಕೇತ್ ಸನದಿ ಅವರು ಸ್ಥಳಕ್ಕೆ ಬಂದಿದ್ದರು.’

ಸ್ಥಳಕ್ಕೆ ಬಂದ ಸಿಬ್ಬಂದಿಗಳಿಗೆ ಶಾಕ್ ಆಗಿತ್ತು.‌ ವಿದ್ಯುತ್ ಕಂಬ ತುಂಡಾಗಿ, ವರಲ್ ನೆಲಕ್ಕೆ ಉರುಳಿತ್ತು. ಅಲ್ಲದೇ ಬೆಣ್ಣೆಕುದ್ರು ಶಾಲೆಯ ಹಿಂಭಾಗದಲ್ಲಿ ದಟ್ಟನೆರೆ ಆವರಿಸಿತ್ತು.

ಆದರೂ ತಮ್ಮ ಜೀವದ ಹಂಗನ್ನು ತೊರೆದು ಮೆಸ್ಕಾಂ ಸಿಬ್ಬಂದಿಗಳಾದ ಶ್ರೀಧರ್ ಹಾಗೂ ಸಂಕೇತ್ ಅವರು ನೆರೆಯ‌ ನೀರಿನಲ್ಲಿಯೇ ಬಹುದೂರ ಸಾಗಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇದರಿಂದಾಗಿ ಬೆಣ್ಣೆಕುದ್ರು ಸುತ್ತಮುತ್ತಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಆದ್ರೀಗ ಮೆಸ್ಕಾಂ ಸಿಬ್ಬಂದಿಗಳ ಕಾರ್ಯವೈಖರಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ ನೆರೆಯ ನೀರಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಸಾಗುತ್ತಿರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳಗಾವಿ ಜಿಲ್ಲೆಯ ಶ್ರೀಧರ್ ಬಡಿಗೇರ ಹಾಗೂ ಸಂಕೇತ್ ಸನದಿ ಕಳೆದ ಕೆಲ ವರ್ಷಗಳಿಂದಲೂ ಬ್ರಹ್ಮಾವರ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರೀ ಮಳೆಯ ನಡುವಲ್ಲೇ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ನಮ್ಮದೊಂದು ಸಲಾಂ.

Leave A Reply

Your email address will not be published.