ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಜುಲೈ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು ಕೋವಿಡ್ 2ನೇ ಅಲೆಯಲ್ಲಿ ಬಿಗುವಿನ ಪರಿಸ್ಥಿತಿ ಇದೆ. ಮಾಡಬೇಕೋ, ಮಾಡಬಾರದೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹಿಂದಿನ ಎಲ್ಲಾ ಶಿಕ್ಷಣ ಸಚಿವರ ಜೊತೆಗೆ ಸಮಾಲೋಚನೆ ಮಾಡಿ, ಅಭಿಪ್ರಾಯ ಸಂಗ್ರಹಿಸಿದ್ದೇನೆ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಮಕ್ಕಳ ಯೋಗಕ್ಷೇಮ ಹಾಗೂ ಶೈಕ್ಷಣಿಕ ಭವಿಷ್ಯದ ದೃಷ್ಠಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ವಿಸೃತವಾದ ಚರ್ಚೆ ನಡೆಸಲಾಗಿದೆ. ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 8.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಈ ಬಾರಿ ಕೇವಲ ಎರಡು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ ಒಂದು ಪತ್ರಿಕೆ ಹಾಗೂ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಇನ್ನೊಂದು ಪತ್ರಿಕೆ. ಪ್ರತೀ ವಿಷಯಕ್ಕೆ 40 ಅಂಕದಂತೆ 120 ಅಂಕ ನೀಡಲಾಗುತ್ತದೆ. ಪರೀಕ್ಷೆಗೆ ಒಟ್ಟು ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪ್ರಶ್ನೆ ಸರಳ, ನೇರವಾಗಿರುತ್ತದೆ. ಯಾವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದಂತ ಪ್ರಶ್ನೆಗಳನ್ನು ನೀಡಲಾಗುತ್ತದೆ. ಈ ಬಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದರು.
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಇಲ್ಲದೇ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಗಿತ್ತು. ಜುಲೈ 3ನೇ ವಾರದಂದು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದಲೂ ಮಾಹಿತಿ ಪಡೆದು ನಿರ್ಧಾರ ಮಾಡಲಾಗಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಗ್ರೇಡ್ ಮಾದರಿಯಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವಂತ ವಿದ್ಯಾರ್ಥಿ ಗಳಿಗೆ ಎನ್-95 ಮಾಸ್ಕ್ ನೀಡಲಾಗುತ್ತದೆ. ಈ ಬಗ್ಗೆ ಸದ್ಯದಲ್ಲೇ ಮಾದರಿ ಪ್ರಶ್ನೆ ಪತ್ರಿಕೆ ಕೂಡ ಬಿಡುಗಡೆ ಮಾಡಲಾಗುತ್ತದೆ. ಯಾರನ್ನೂ ಅನುತೀರ್ಣ ಮಾಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಶಿಕ್ಷಕರಿಗೆ ಕೊರೊನಾ ಲಸಿಕೆ ಹಾಕಿಸಲಾಗುತ್ತದೆ. ಊರಿಗೆ ತೆರಳಿರುವ ವಿದ್ಯಾರ್ಥಿಗಳು ಅವರ ಸಮೀಪದ ಶಾಲೆಗಳಲ್ಲಿ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡಲಾಗಿದೆ. ಎಸ್ ಎಸ್ ಎಲ್ ಸಿಯ ಪರೀಕ್ಷಾ ದಿನಾಂಕವನ್ನು 20 ದಿನಗಳ ಮೊದಲೇ ಪ್ರಕಟಿಸಲಾಗುತ್ತದೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.