ತುಮಕೂರು : ಐಟಿ – ಬಿಟಿ ಸೇರಿದಂತೆ ವಿವಿಧ ಕಂಪೆನಿಗಳಲ್ಲಿರುವ ವರ್ಕ್ ಫ್ರಂ ಹೋಮ್ ರೀತಿಯಲ್ಲಿಯೇ ವಿದ್ಯಾರ್ಥಿಗಳಿಗೆ ಕೂಡ ಸ್ಟಡಿ ಫ್ರಂ ಹೋಮ್ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಗಳ ಅನ್ವಯ 100 ದಿನಗಳಷ್ಟೇ ಶೈಕ್ಷಣಿಕ ಚಟುವಟಿಕೆ ನಡೆಸಲು ಅವಕಾಶವಿದೆ. ಹೀಗಾಗಿ ಮಕ್ಕಳಿಗೆ ಹೊರೆಯಾಗದಂತೆ ಪಠ್ಯವನ್ನು ರೂಪಿಸಬೇಕಿದೆ. ಮಕ್ಕಳು ಶಾಲೆಯಲ್ಲಿನ ತರಗತಿಗಳಿಗಿಂತ ಮನೆಯಲ್ಲಿಯೇ ಹೆಚ್ಚುಕಾಲ ಪಾಠಕೇಳುವ ದಿನಗಳು ಬರಲಿವೆ. ಇದಕ್ಕಾಗಿ ನಾವೆಲ್ಲ ಸಿದ್ದರಾಗಬೇಕಿದೆ ಎಂದು ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಎಸ್ಎಸ್ಎಲ್ ಸಿ ಪರೀಕ್ಷಾ ಪೂರ್ವ ಸಿದ್ದತೆಯ ಕುರಿತು ತುಮಕೂರಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸ್ಟಡಿ ಫ್ರಂ ಹೋಮ್ ಕುರಿತು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕೇಂದ್ರ ಸರಕಾರ ಮುಂದಿನ ಶೈಕ್ಷಣಿಕ ವರ್ಷದ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಯ ಪ್ರಕಾರ, ಶಾಲೆಗಳನ್ನು ಪಾಳಿಯಲ್ಲಿ ನಡೆಸಬೇಕು, ಇಲ್ಲವೇ ದಿನ ಬಿಟ್ಟು ದಿನ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ.

ಎಸ್ಎಸ್ಎಲ್ ಸಿ ಪುನರ್ಮನನ ತರಗತಿಗಳನ್ನು ಚಂದನ ವಾಹಿನಿಯ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಚಂದನ ವಾಹಿನಿಯನ್ನು ಬಳಸಿಕೊಂಡು ಮಕ್ಕಳಿಗೆ ಪಾಠ ಬೋಧಿಸುವ ಪ್ಲ್ಯಾನ್ ಮಾಡಿಕೊಳ್ಳಲಾಗಿದ್ದು, ಇನ್ನೂ ಮೂರು ವಾಹಿನಿಗಳನ್ನು ಶಿಕ್ಷಣಕ್ಕೆ ನೀಡುವಂತೆ ಈಗಾಗಲೇ ಪ್ರಸಾರ ಭಾರತಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ.

ಎಸ್ಎಸ್ಎಲ್ ಸಿ ಪರೀಕ್ಷೆಯ ಕುರಿತು ವಾಟ್ಸಾಪ್ ಗಳಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಆದರೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆದೇ ತೀರುತ್ತದೆ. ಮಕ್ಕಳನ್ನು ಪರೀಕ್ಷೆ ಎದುರಿಸುವ ಕುರಿತು ಅಣಿಗೊಳಿಸಬೇಕಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹಲವು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದಿದ್ದಾರೆ.