ಬೆಂಗಳೂರು : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅಕ್ಟೋಬರ್ 4ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಾವಿರಾರು ಮಂದಿ ಆಕಾಂಕ್ಷಿಗಳು ಈ ಬಾರಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿಇಟಿ ಪರೀಕ್ಷೆ ನಡೆಯುತ್ತೋ ಇಲ್ಲವೋ ಅನ್ನೋ ಗೊಂದಲಕ್ಕೆ ಸಿಲುಕಿದ್ದರು. ಆದ್ರೀಗ ಸಚಿವ ಸುರೇಶ್ ಕುಮಾರ್ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಮಾತ್ರವಲ್ಲ ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ ಟಿಇಟಿ ಪರೀಕ್ಷೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರೀಕ್ಷೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಮಾತ್ರವಲ್ಲ ಪೂರ್ವ ಬಾಲ್ಯಾವಸ್ಥೆಯ ಶಿಕ್ಷಣ, ಮೂಲಸಾಕ್ಷರತೆ ಮತ್ತು ಸಂಖ್ಯಾಜ್ಞಾನ, ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಕಡಿತಗೊಳಿಸುವುದು, ಶಾಲಾ ಪಠ್ಯಕ್ರಮ ಮಾದರಿರೂಪಿಸಬೇಕಿದೆ.

ಗುಣಮಟ್ಟದ ಶಿಕ್ಷಣ-ಶಿಕ್ಷಕರ ಸೇವೆಗಳು, ಪರಿಣಾಮಕಾರಿ ಆಡಳಿತ ವ್ಯವಸ್ಥೆ, ನಿಯಂತ್ರಣಾ ವ್ಯವಸ್ಥೆ ಸೇರಿ ಶಾಲಾ ಶಿಕ್ಷಣದ ವಿವಿಧ ಘಟ್ಟಗಳು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವಲ್ಲಿ, ಮುಂದಿನ ಎರಡು ದಶಕಗಳ ಶೈಕ್ಷಣಿಕ ಕ್ಷೇತ್ರದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ನೀತಿ ನಿರೂಪಣೆಗೆ ಮುಂದಾಗಬೇಕೆಂದು ಸುರೇಶ್ ಕುಮಾರ್ ಹೇಳಿದರು.