ಉಡುಪಿ ಜಿಲ್ಲೆಯಲ್ಲಿ ಜುಲೈ 6 ರಂದು ಶಾಲೆಗಳಿಗೆ ರಜೆ : ರೆಡ್‌ ಅಲರ್ಟ್‌ ಘೋಷಣೆ

ಉಡುಪಿ : Udupi School Holiday: ಕೃಷ್ಣನಗರಿ ಉಡುಪಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಾದ್ಯಂತ ಗುರುವಾರವೂ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ, ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೇ ಗುರುವಾರವೂ ಮಳೆ ಮುಂದುವರಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೃತಕ ನೆರೆ ಹಾವಳಿ ಸೃಷ್ಟಿಯಾಗಿದೆ. ಉಡುಪಿ ನಗರದ ಕೃಷ್ಣಮಠ ಸುತ್ತಮುತ್ತ, ಬನ್ನಂಜೆ ಮುಂತಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಹುತೇಕ ತೋಟಗಳು ಜಲಾವೃತವಾಗಿದೆ. ಮಳೆ ಗುರುವಾರವೂ ಮುಂದುವರಿಯುವ ಸಾಧ್ಯತೆಯ ಹಿನ್ನೆಲೆಯಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಚಿತ್ರಪಾಡಿ, ಬೆಟ್ಲಕ್ಕಿ, ಹಂದಟ್ಟು, ಪಾರಂಪಳ್ಳಿ ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಕೆಮಿಕಲ್‌ ಮರವಾಯಿ : ತಿಂದವರಿಗೆ ವಾಂತಿ, ಬೇಧಿ ಫಿಕ್ಸ್‌, ತಿನ್ನುವ ಮುನ್ನ ಹುಷಾರ್‌ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಗುರುವಾರವೂ ರಜೆಯನ್ನು ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಗುರುವಾರ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಲವು ತುರ್ತುಕ್ರಮಗಳನ್ನು ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರಕಾರಿ, ಅನುದಾನಿತ, ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಜುಲೈ ೬ರಂದು ರಜೆ ಘೋಷಿಸಲಾಗಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆಯನ್ನು ನೀಡಲಾಗಿದ್ದು, ನೀರು ಇರುವ ತಗ್ಗು ಪ್ರದೇಶಗಳಲ್ಲಿನ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳನ್ನು ಹೋಗದಂತೆ ಪೋಷಕರು ಜಾಗೃತೆ ವಹಿಸಬೇಕಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು, ವಿಪತ್ತು ನಿರ್ವಹಣೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೆರೆಹಾವಳಿ ಉಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮಂಗಳೂರು ನಗರದ ಕೆಲವು ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಇನ್ನು ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವರು ಸಾವನ್ನಪ್ಪುವ ಮೂಲಕ ಆರಿದ್ರಾ ಮಳೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಮಂಗಳೂರು, ಮೂಡಬಿದಿರೆ, ಮೂಲ್ಕಿ ತಾಲೂಕುಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದೆ. ಮುಂದಿನ ಒಂದೆರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : ಬ್ರಹ್ಮಾವರಕ್ಕೆ ಬೇಕಿದೆ ಕೃಷಿ ಕಾಲೇಜು, ಕರಾವಳಿ ಕೃಷಿಕರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ?

Comments are closed.