ನವದೆಹಲಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆ ನಡೆಸದಿರಲು ಕೇಂದ್ರ ಸರಕಾರ ತೀರ್ಮಾನ ಕೈಗೊಂಡಿದೆ.

ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಯ ಕುರಿತು ಗೊಂದಲಗಳು ಏರ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಪ್ರಾಧಾಪ್ಯಕರು ಹಾಗೂ ಪ್ರೊಪೆಸರ್ ಗಳ ಜೊತೆಗೆ ಟ್ವಿಟರ್ ನಲ್ಲಿ ಸಂವಾದ ನಡೆಸಿದ್ದಾರೆ.

ಪ್ರಥಮ ಹಾಗೂ ದ್ವಿತೀಯ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಮೊದಲ ಸೆಮಿಸ್ಟರ್ ನಲ್ಲಿ ಪಡೆದಿರುವ ಅಂಕ ಹಾಗೂ ಹಿಂದಿನ ಶೈಕ್ಷಣಿಕ ದಾಖಲೆಗಳನ್ನು ಆಧರಿಸಿ ದ್ವಿತೀಯ ಪದವಿ ತರಗತಿಗೆ ಹಾಗೂ ಶೈಕ್ಷಣಿಕ ಸಾಧನೆಯ ಶೇ.50 ರಷ್ಟು ಅಂಕ ಹಾಗೂ ಶೇ.50 ರಷ್ಟು ಇಂಟರ್ನಲ್ ಅಂಕವನ್ನು ಆಧರಿಸಿ ಅಂತಿಮ ಪದವಿ ತರಗತಿಗೆ ಪ್ರಮೋಷನ್ ನೀಡಲಾಗುತ್ತದೆ ಎಂದಿದ್ದಾರೆ.

ಆದರೆ ಅಂತಿಮ ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ. ಜುಲೈ ತಿಂಗಳಿನಲ್ಲಿ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದೂಡಿಕೆಯಾದರೂ ಕೂಡ ಅಂತಿಮ ವರ್ಷದ ಪದವಿ ತರಗತಿಗಳು ನಡೆಯುವುದು ನಿಶ್ಚಿತ ಎಂದಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಅಂತಿಮ ಪದವಿ ತರಗತಿಯ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಯಾವುದೇ ರೀತಿಯ ಅನುಮಾನಗಳಿದ್ದರೆ ಯುಜಿಸಿ ಕಾರ್ಯಪಡೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ದೇಶದಾದ್ಯಂತ 45 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಿದ್ದು, ಕೇಂದ್ರ ಸರಕಾರದ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.