ಸಿಎಂ ಕುರ್ಚಿಯಿಂದ ಯಡಿಯೂರಪ್ಪ ಕೆಳಗಿಳಿಸಲು ರಣತಂತ್ರ : ಬೆಂಗಳೂರಲ್ಲಿ 27 ಅತೃಪ್ತ ಬಿಜೆಪಿ ಶಾಸಕರ ರಹಸ್ಯ ಸಭೆ

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಡುವಲ್ಲೇ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಮುಂಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಸ್ವತಃ ಬಿಜೆಪಿ ಶಾಸಕರೇ ಮುನಿಸಿಕೊಂಡಿದ್ದಾರೆ. ಯಡಿಯೂರಪ್ಪ ನವರನ್ನು ಸಿಎಂ ಕುರ್ಚಿಯಿಂದ ಕೆಳಗಿಸೋದಕ್ಕೆ ಪಣತೊಟ್ಟಿರುವ 27 ಮಂದಿ ಬಿಜೆಪಿ ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ.

ಮೈತ್ರಿ ಸರಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರುವ ಹೊತ್ತಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬಿಜೆಪಿ ಶಾಸಕರೇ ಮಗ್ಗುಲಮುಳ್ಳಾಗಿದ್ದರು. ರಾಜ್ಯದಲ್ಲಿ ಸಚಿವ ಸಂಪುಟ ರಚನೆ, ವಿಸ್ತರಣೆಯ ಸಂರ್ಭದಲ್ಲಿಯೂ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿತ್ತು. ಇದೀಗ ರಾಜ್ಯಸಭಾ ಚುನಾವಣಾ ಹೊತ್ತಲೇ ಉತ್ತರ ಕರ್ನಾಟಕ ಭಾಗದ ಬಹುತೇಕ ಶಾಸಕರು ಸಿಎಂ ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದಾರೆ. ಮಾಜಿ ಸಚಿವ, ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರ ನೇತೃತ್ವದಲ್ಲಿ ಯಲಹಂಕದ ನಿವಾಸದಲ್ಲಿ ಬಿಜೆಪಿಯ 27 ಮಂದಿ ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಉಮೇಶ್ ಕತ್ತಿ ತನ್ನ ಸಹೋದರ ರಮೇಶ್ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವೇಳೆಯಲ್ಲಿ ಯಡಿಯೂರಪ್ಪ ಕೇವಲ ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುವ ಭರವಸೆಯನ್ನಷ್ಟೇ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಅಸಮಾಧಾನವನ್ನು ಹೊರಹಾಕಿದ್ದರು. ಅತೃಪ್ತ ಶಾಸಕರ ಸಭೆಯಲ್ಲಿಯೂ ಇದೇ ವಿಚಾರವನ್ನೂ ಪ್ರಸ್ತಾಪಿಸಲಾಗಿತ್ತು. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಕುರಿತು ಸುದೀರ್ಘ ಅವಧಿಯವರೆಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಅಪ್ಪು ಗೌಡ, ಮಹದೇವ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ 5 ಜಿಲ್ಲೆಗಳ 27 ಮಂದಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆನ್ನಲಾಗುತ್ತಿದೆ. ಯಲಹಂಕದ ನಿವಾಸದಲ್ಲಿ ಸಭೆ ನಡೆಸುವ ಮೊದಲು ಶಾಸಕರು ಸತತ ಎರಡು ದಿನಗಳ ಕಾಲ ಶಾಸಕರ ಭವನದಲ್ಲಿ ಸಭೆ ನಡೆಸಿದ್ದಾರೆ.

ಶಾಸಕರ ನಿವಾಸದಲ್ಲಿಯೇ ಸಭೆಯ ರೂಪುರೇಷೆಗಳ ಕುರಿತು ಚರ್ಚಿಸಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರದಲ್ಲಿ ಉತ್ತರ ಕರ್ನಾಟಕ ಭಾಗದ ಹಿರಿಯ ಶಾಸಕರನ್ನು ಕಡೆಗಣಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ರಾಜ್ಯಸಭಾ ಚುನಾವಣೆಯ ಹೊತ್ತಲ್ಲೇ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಅತ್ರಪ್ತ ಶಾಸಕರು ಇನ್ನೊಂದು ಸುತ್ತಿನ ಸಭೆ ನಡೆಸುವ ಸಾಧ್ಯತೆಯಿದೆ. ಇಂದಿನ ಸಭೆಯಲ್ಲಿ ಯಡಿಯೂರಪ್ಪನವರನ್ನು ಕುರ್ಚಿಯಿಂದ ಕೆಳಗಿಸುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿದ್ದಾರೆನ್ನುವ ಮಾತುಗಳು ಪಕ್ಷದ ಮೂಲದಿಂದಲೇ ಕೇಳಿಬರುತ್ತಿದೆ. ಹೇಗಾದ್ರೂ ಸಿಎಂ ಸ್ಥಾನಕ್ಕೆ ಬದಲಿ ನಾಯಕನನ್ನು ತಂದು ಕೂರಿಸಿದ್ರೆ ತಮಗೆ ಸೂಕ್ತ ಸ್ಥಾನಮಾನ ಲಭಿಸುತ್ತೆ ಅನ್ನೋದು ಬಿಜೆಪಿಯ ಹಿರಿಯ ಶಾಸಕರ ಲೆಕ್ಕಾಚಾರ.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಖುದ್ದು ಪಕ್ಷ ಹಿರಿಯ ಶಾಸಕರೇ ಮುನಿಸಿಕೊಂಡಿರುವುದು ಜಗಜ್ಜಾಹೀರಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಅಸಮಾಧಾನ ಸ್ಪೋಟಗೊಳ್ಳುತ್ತಲೇ ಇದೆ. ಮಾತ್ರವಲ್ಲ ಕಳೆದ ಬಾರಿಯ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿಯೂ ರಹಸ್ಯ ಸಭೆ ನಡೆಸಲಾಗಿತ್ತು. ಇದೀಗ ಉತ್ತರ ಕರ್ನಾಟಕ ಭಾಗದ ಶಾಸಕರು ಕೊರೊನಾ ಸೋಂಕು ಹರಡುತ್ತಿರೋ ನಡುವಲ್ಲೇ ರಹಸ್ಯ ಸಭೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Leave A Reply

Your email address will not be published.