ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಲಾಕ್ ಡೌನ್ ಆದೇಶವನ್ನು ಹಂತ ಹಂತವಾಗಿ ಸಡಿಲ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಅನ್‍ಲಾಕ್-2 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು, ತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.

ಜೂನ್ 30ರಂದು ಅನ್ ಲಾಕ್ -1 ಆದೇಶ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇದೀಗ ಅನ್ ಲಾಕ್-2 ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅನ್ ಲಾಕ್ -1 ಮಾರ್ಗಸೂಚಿಯಂತೆಯೇ ಅನ್ ಲಾಕ್ -2 ಮಾರ್ಗಸೂಚಿಯಿದೆ. ಶೈಕ್ಷಣಿಕ ಸಂಸ್ಥೆಗಳು, ಮೆಟ್ರೋ ರೈಲು, ಸಿನಿಮಾ, ಜಿಮ್, ಸ್ವಿಮ್ಮಿಂಗ್ ಫೂಲ್, ಎಂಟರ್ ಟೈನ್ಮೆಂಟ್ ಪಾರ್ಕ್, ಬಾರ್, ಸಭಾಭವನಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭಗಳ ಮೇಲೆ ನಿಷೇಧ ಹೇರಲಾಗಿದೆ.

ಅನ್ ಲಾಕ್ -2 ಮಾರ್ಗಸೂಚಿಯಲ್ಲೇನಿದೆ ?
- ಜುಲೈ 31ರ ವರೆಗೂ ಶಾಲಾ, ಕಾಲೇಜು, ಟ್ಯೂಷನ್ ಸೆಂಟರ್ ಸೇರಿದಂತೆ ಯಾವುದೇ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವಂತಿಲ್ಲ.
- ವರ್ಕ್ ಫ್ರಂ ಹೋಮ್ ಗೆ ಮೊದಲ ಆದ್ಯತೆ ನೀಡುವುದು. ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕಂಪನಿಗಳು ನೋಡಿಕೊಳ್ಳತಕ್ಕದ್ದು.
- ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯಯವಾಗಿ ಮಾಸ್ಕ್ ಧರಿಸುವುದು ಮತ್ತು 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
- ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವುದು.
- ಕೆಲಸದ ಸ್ಥಳ, ಮಾರುಕಟ್ಟೆ, ಮಾಲ್, ಧಾರ್ಮಿಕ ಕೇಂದ್ರಗಳ ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು.
- ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ದೊಡ್ಡ ಸಮಾರಂಭಗಳನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಿದೆ.