ಕುಂದಾಪುರ : ಕೊರೊನಾ ವೈರಸ್ ಸೋಂಕಿನ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಆದರೆ ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದಿದ್ದು, ಈ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಬಾರಿಯೂ ಶೇ.100ರ ಫಲಿತಾಂಶ ದಾಖಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ರೆ. ಕಾಲೇಜಿನ ಮೂವರು ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕವನ್ನು ಪಡೆದು ರಾಜ್ಯಮಟ್ಟದಲ್ಲಿಯೇ ಟಾಪ್ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ವೆಂಕಟರಮಣ ದೇವ್ ಎಜುಕೇಶನ್ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಡಿಯಲ್ಲಿ ಕುಂದಾಪುರದಲ್ಲಿ ಆರಂಭಗೊಂಡ ವೆಂಕಟರಮಣ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದಲೂ ಶೇ.100ರ ಫಲಿತಾಂಶವನ್ನು ದಾಖಲಿಸುವ ಮೂಲಕ ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಸಾಲಿಗೆ ಸೇರ್ಪಡೆಯಾಗಿದೆ. ಮಾತ್ರವಲ್ಲ ತನ್ನ ಶೈಕ್ಷಣಿಕ ಸಾಧನೆಯನ್ನು ಈ ಬಾರಿಯೂ ಮುಂದುವರಿಸಿದೆ. ಉಡುಪಿ ಜಿಲ್ಲೆಯ ಶ್ರೇಷ್ಟ ಕಾಲೇಜು ಎನಿಸಿಕೊಂಡಿರುವ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ತಾಲೂಕಿನಲ್ಲಿ ನಂ.1 ಸ್ಥಾನವನ್ನು ಈ ಬಾರಿಯೂ ತನ್ನಲ್ಲೇ ಉಳಿಸಿಕೊಂಡಿದೆ.

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 202 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 108 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಯೂ 94 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಪೈಕಿ ವಿಜ್ಞಾನ ವಿಭಾಗದಲ್ಲಿ ಒಟ್ಟು 118 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 63 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 55 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ ಒಟ್ಟು 84 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ರೆ 45 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವೆಂಕಟರಮಣ ಪದವಿ ಪೂರ್ವ ಕಾಲೇಜು ಪ್ರತೀ ವರ್ಷವೂ ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡುತ್ತಿದ್ದು, ಈ ಬಾರಿ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಪೈ ವಾಣಿಜ್ಯ ವಿಭಾಗದಲ್ಲಿ 594 ಅಂಕಗಳನ್ನು ಪಡೆಯುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸೋಹನ್ ಕುಮಾರ್ ಶೆಟ್ಟಿ 589 ಅಂಕಗಳಿಸಿ ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಭುವನ್ 588 ಅಂಕಗಳಿಸುವ ಮೂಲಕ 8ನೇ ಸ್ಥಾನವನ್ನು ಪಡೆದಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿತ ಕಾರ್ಯದರ್ಶಿಗಳಾದ ಕೆ.ರಾಧಾಕೃಷ್ಣ ಶೆಣೈ ಹಾಗೂ ಶೈಕ್ಷಣಿಕ ಮಾರ್ಗದರ್ಶಕರಾದ ಚಿತ್ರಾ ಕಾರಂತ್ ಅವರ ಮಾರ್ಗದರ್ಶನದಲ್ಲಿ ಕಾಲೇಜು ಮುನ್ನಡೆಯುತ್ತಿದೆ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರ ನೇತೃತ್ವದಲ್ಲಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ಬೋಧಿಸುತ್ತಿದ್ದಾರೆ. ಇನ್ನು ದೈಹಿಕ ಶಿಕ್ಷಣ ಸಲಹೆಗಾರರಾದ ಪ್ರದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಕ್ರೀಡಾ ವಿಭಾಗದಲ್ಲಿಯೂ ರಾಷ್ಟ್ರಮಟ್ಟದ ಸಾಧನೆಯನ್ನು ಮೆರೆಯುತ್ತಿದೆ. ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣದ ಜೊತೆಗೆ ಸಿಇಟಿ, ಎನ್ಇಇಟಿ, ಜೆಇಇ-ಎಂ ಆಂಡ್ ಐಐಟಿ ತರಬೇತಿಯನ್ನೂ ನೀಡಲಾಗುತ್ತಿದೆ.