ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದ್ರೀಗ ವಿದ್ಯಾಗಮ ಯೋಜನೆ ಶಿಕ್ಷಕರ ಪಾಲಿಗೆ ಯಮನಂತಾಗಿದೆ. ಈಗಾಗಲೇ ರಾಜ್ಯದಲ್ಲಿ 110 ಶಿಕ್ಷಕರು ಹಾಗೂ 28 ಉಪನ್ಯಾಸಕರು ಬಲಿಯಾಗಿದ್ದಾರೆ. ಮಾತ್ರವಲ್ಲ ವಿದ್ಯಾರ್ಥಿಗಳು ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ರಾಜ್ಯದಲ್ಲೀಗ ಶಾಲಾರಂಭದ ಕುರಿತು ಚರ್ಚೆಗಳು ನಡೆಯುತ್ತಿದೆ. ಕೊರೊನಾ ಸೋಂಕಿನ ಆರ್ಭಟದ ನಡುವಲ್ಲೇ ಶಾಲೆ ಆರಂಭಿಸಲು ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಕನಸಿನ ಯೋಜನೆಯಾಗಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮಾತ್ರವಲ್ಲ ವಿದ್ಯಾಗಮ ಯೋಜನೆ ದೇಶಕ್ಕೆ ಮಾದರಿಯಾಗುತ್ತೆ ಅಂತಾನೂ ಹೇಳಿದ್ದರು. ಆದ್ರೀಗ ವಿದ್ಯಾಗಮ ಯೋಜನೆ ಶಿಕ್ಷಕರ ಪಾಲಿಗೆ ಸಾವಿನ ಮನೆಯಾಗುತ್ತಿದೆ. ವಿದ್ಯಾಗಮ ಯೋಜನೆಯಲ್ಲಿ ತೊಡಗಿಕೊಂಡಿರುವ ನೂರಾರು ಶಿಕ್ಷಕರು ಸಾವನ್ನಪ್ಪಿರೋದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಇದುವರೆಗೂ ಒಟ್ಟು 110 ಶಿಕ್ಷಕರು ಹಾಗೂ 28 ಮಂದಿ ಉಪನ್ಯಾಸಕರು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶಿಕ್ಷಕರು ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ ಒಟ್ಟು 58 ಮಂದಿ ಶಿಕ್ಷಕರು ಸಾವನ್ನಪ್ಪಿದ್ದು, ಈ ಪೈಕಿ 18 ಮಂದಿ ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 23 ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ರೆ, ಈ ಪೈಕಿ 6 ಮಂದಿ ಶಿಕ್ಷಕರು ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಂಡವರಾಗಿ ದ್ದಾರೆ.

ಉಳಿದಂತೆ ಹಾವೇರಿ ಒಟ್ಟು 17 ಮಂದಿ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ರೆ, 2 ಶಿಕ್ಷಕರು ವಿದ್ಯಾಗಮ ಯೋಜನೆಯಲ್ಲಿ ತೊಡಗಿಕೊಂಡಿದ್ದರು. ಕೊಪ್ಪಳ 12 ಮಂದಿ ಸಾವನ್ನಪ್ಪಿದ್ರೆ 11 ವಿದ್ಯಾಗಮ ಯೋಜನೆಯ ಶಿಕ್ಷಕರಾಗಿದ್ದಾರೆ. ಚಿಕ್ಕೋಡಿಯಲ್ಲಿ 17 ಮಂದಿ ಶಿಕ್ಷಕರು ಸಾವನ್ನಪ್ಪಿದ್ದು, ಈ ಪೈಕಿ 3 ಮಂದಿ ವಿದ್ಯಾಗಮ ಯೋಜನೆಯ ಶಿಕ್ಷಕರಾಗಿದ್ದಾರೆ.

ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ತಲಾ 10 ಮಂದಿ ಶಿಕ್ಷಕರು ಸಾವನ್ನಪ್ಪಿದ್ದು, ಈ ಎಲ್ಲಾ ಶಿಕ್ಷಕರು ಕೂಡ ವಿದ್ಯಾಗಮ ಯೋಜನೆ ಯಲ್ಲಿ ಭಾಗಿಯಾದವರೇ ಆಗಿದ್ದಾರೆ. ಹಾಸನ ಜಿಲ್ಲೆಯಲ್ಲಿ 6 ಮಂದಿ ಶಿಕ್ಷಕರು ಸಾವನ್ನಪ್ಪಿದ್ದು, 3 ಮಂದಿ ವಿದ್ಯಾಗಮ ಯೋಜನೆಯಿಂದ ಸಾವನ್ನಪ್ಪಿದ್ದಾರೆ. ಉಳಿದಂತೆ ಉಡುಪಿ ಜಿಲ್ಲೆಯಲ್ಲಿ ಓರ್ವ ಶಿಕ್ಷಕರು ಮಾತ್ರವೇ ಸಾವನ್ನಪ್ಪಿದ್ದಾರೆ.

ಕೇವಲ ಶಿಕ್ಷಕರಷ್ಟೇ ಅಲ್ಲಾ ವಿದ್ಯಾರ್ಥಿಗಳಿಗೂ ಕೂಡ ಕೊರೊನಾ ಸೋಂಕು ದೃಢಪಟ್ಟಿದೆ. ವಿದ್ಯಾಗಮ ಯೋಜನೆಯಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನೀಡಲಾಗಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ಗಾಳಿಗೆ ತೂರಲಾಗಿದೆ. ಶಿಕ್ಷಕರು ನೂರಾರು ಕಿ.ಮೀ. ದೂರದಲ್ಲಿರುವ ವಿದ್ಯಾರ್ಥಿಗಳನ್ನು ನಿತ್ಯವೂ ಭೇಟಿ ಮಾಡುತ್ತಿದ್ದಾರೆ. ಮಾತ್ರವಲ್ಲ ದೇವಸ್ಥಾನ, ಮೈದಾನ, ಸಭಾಂಗಣ ಸೇರಿದಂತೆ ಹಲವರು ಸಾರ್ವಜನಿಕ ಕಡೆಗಳಲ್ಲಿ ವಿದ್ಯಾಗಮ ಬೋಧನೆ ನಡೆಯುವುದರಿಂದ ಕೊರೊನಾ ಸೋಂಕು ಬಹುಬೇಗನೆ ಹರಡುತ್ತಿದೆ. ಕೊರೊನಾ ಸೋಂಕಿತರು ವಿದ್ಯಾಗಮ ನಡೆಯುವ ಸ್ಥಳಕ್ಕೆ ಬಂದಿದ್ದರೆ ಸೋಂಕಿನ ಪ್ರಮಾಣ ಕೂಡ ಏರಿಕೆಯಾಗುವ ಆತಂಕ ಎದುರಾಗಿದೆ.

ರಾಜ್ಯದಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಿರುವ ಶಿಕ್ಷಣ ಇಲಾಖೆಯಾಗಲಿ, ರಾಜ್ಯ ಸರಕಾರವಾಗಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕನಿಷ್ಠ ಮಾಸ್ಕ್, ಸ್ಯಾನಿಟೈಸರ್ ಒದಗಿಸುವ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಅಷ್ಟೇ ಯಾಕೆ ವಿದ್ಯಾಗಮ ಯೋಜನೆಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆ ನಡೆಸುತ್ತಿಲ್ಲ. ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಹೇಳುತ್ತಿರುವ ಸಚಿವರು ಇದುವರೆಗೂ ಶಿಕ್ಷಕರನ್ನಾಗಲಿ, ವಿದ್ಯಾರ್ಥಿಗಳನ್ನಾಗಲಿ ಕೊರೊನಾ ಪರೀಕ್ಷೆ ಒಳಪಡಿಸಿಲ್ಲ.

ಅಷ್ಟೇ ಯಾಕೆ ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಂಡು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ ಶಿಕ್ಷಕರಿಗೆ ಸರಕಾರ ಯಾವುದೇ ಪರಿಹಾರವನ್ನೂ ನೀಡುತ್ತಿಲ್ಲ. ಕೇವಲ ಕೊರೊನಾ ವಿರುದ್ದದ ಹೋರಾಟದಲ್ಲಿ ಬಾಗಿಯಾದ ಶಿಕ್ಷಕರಿಗಷ್ಟೇ ಸರಕಾರ ವಿಮೆ ಸೌಲಭ್ಯ ಲಭ್ಯವಾಗುತ್ತಿದೆ. ಇನ್ನಾದ್ರೂ ಸರಕಾರ ಎಚ್ಚೆತ್ತುಕೊಳ್ಳದಿದ್ರೆ ಇನ್ನಷ್ಟು ಶಿಕ್ಷಕರು, ವಿದ್ಯಾರ್ಥಿಗಳು ಬಲಿಯಾಗೋದು ಗ್ಯಾರಂಟಿ.