ಮಂಗಳೂರು : ರಾಜ್ಯ ಸರಕಾರದ ವಿದ್ಯಾಗಮ ಯೋಜನೆಯಡಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶಿಕ್ಷಕಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ನೆಹರೂ ಮಕ್ಕಿ ಅನುದಾನಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಪದ್ಮಾಕ್ಷಿ ಎನ್. ಅವರು ವಿದ್ಯಾಗಮ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು.

ಆರೋಗ್ಯವಾಗಿದ್ದ ಶಿಕ್ಷಕಿಗೆ ವಿದ್ಯಾಗಮ ಯೋಜನೆಯಿಂದಲೇ ಕೊರೊನಾ ಸೋಂಕು ತಗುಲಿತ್ತು. ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಶಿಕ್ಷಕಿ ಪದ್ಮಾಕ್ಷಿಯ ಬೆನ್ನಲ್ಲೇ ಅವರ ಪತಿಗೂ ಕೂಡ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶಿಕ್ಷಕಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯದೇ ಇದ್ದಾಗ, ಸ್ಥಳೀಯ ಜನಪ್ರತಿನಿಧಿಗಳ ಬಳಿಯಲ್ಲಿ ಚಿಕಿತ್ಸೆಗೆ ಮೊರೆಯಿಟ್ಟಿದ್ದರು. ಆದರೆ ಯಾವುದೇ ಪ್ರಯೋಜನವಾಗದೇ ಇದ್ದಾಗ ಪದ್ಮಾಕ್ಷಿ ಅವರ ಪುತ್ರಿ ಐಶ್ವರ್ಯ ಅವರು ತಮ್ಮ ಸಂಕಷ್ಟಕ್ಕೆ ನೆರವಾಗುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರಿಗೆ ಮನವಿ ಮಾಡಿದ್ದರು. ತನ್ನ ತಾಯಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾದ್ರೆ ಸರಕಾರವೇ ನೇರ ಹೊಣೆ ಎಂದು ಕೂಡ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶಿಕ್ಷಕಿಯ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುವುದಾಗಿಯೂ ಹೇಳಿದ್ದರು. ಅಲ್ಲದೇ ಉತ್ತಮ ಚಿಕಿತ್ಸೆಯನ್ನು ಕೊಡಿಸುವ ಭರವಸೆಯನ್ನು ನೀಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕಿ ಕೊನೆಯುಸಿರೆಳೆದಿದ್ದಾರೆ.