ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಭರ್ಜರಿ ಪೈಪೋಟಿ : ಸಿದ್ದು, ಡಿಕೆಶಿ ಬೆನ್ನಲ್ಲೇ ಪ್ರಿಯಾಂಕ ಖರ್ಗೆ ಹೆಸರು

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಆದ್ರೂ ಕೂಡ ಕಾಂಗ್ರೆಸ್‌ ಪಕ್ಷ ಚುನಾವಣೋತ್ತರ ಸಮೀಕ್ಷೆಯನ್ನೇ ಆಧರಿಸಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷದಲ್ಲಿ (Karnataka CM) ಸಿಎಂ ಹುದ್ದೆಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೆಸರು ಮಂಚೂಣಿಯಲ್ಲಿ ಕೇಳಿಬಂದಿದೆ. ಈ ನಡುವಲ್ಲೇ ಪ್ರಿಯಾಂಕ ಖರ್ಗೆ ಬೆಂಬಲಿಗರು ದಲಿತ ಸಿಎಂ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದ ಬೆನ್ನಲ್ಲೇ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದು, ಮಾತ್ರವಲ್ಲದೇ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದೀಗ ಬಹುತೇಕ ಸಮೀಕ್ಷೆಗಳಲ್ಲಿಯೂ ಕಾಂಗ್ರೆಸ್‌ ಪರ ಒಲವು ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ವರಿಷ್ಠರ ಜೊತೆಗೆ ಸಾಲು ಸಾಲು ಸಭೆಗಳನ್ನು ನಡೆಸಿದ್ದಾರೆ. ಹೊಸ ಶಾಸಕರು ಈ ಬಾರಿ ಸಿದ್ದರಾಮಯ್ಯ ಸಿಎಂ ಆಗಲು ಬೆಂಬಲ ಸೂಚಿಸುತ್ತಾರೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಸಿದ್ದರಾಮಯ್ಯ.

ಇನ್ನು ಕೆಪಿಸಿಸಿ ಅಧ್ಯಕ್ಷರನ್ನೇ ಸಿಎ ಹುದ್ದೆಗೆ ಪರಿಗಣನೆ ಮಾಡುವುದು ಕಾಂಗ್ರೆಸ್‌ ಪಕ್ಷದಲ್ಲಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹೀಗಾಗಿ ಹೈಕಮಾಂಡ್‌ ತನ್ನನ್ನೇ ಸಿಎಂ ಮಾಡ್ತಾರೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಡಿಕೆ ಶಿವಕುಮಾರ್‌. ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್‌ ಪಕ್ಷದ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್‌ ಅವರನ್ನೇ ಸಿಎಂ ಹುದ್ದೆಯ ಮೇಲೆ ಕೂರಿಸಬೇಕು ಅನ್ನೋದು ಡಿಕೆಶಿ ಅವರ ಡಿಮ್ಯಾಂಡ್.‌

ಇನ್ನೊಂದೆಡೆಯಲ್ಲಿ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರು ಸಿಎಂ ಆಗದೇ ಇದ್ರೆ ತಾನು ಸಿಎಂ ಆಗಲು ರೆಡಿ ಅಂತಾ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಹೇಳಿಕೆಯನ್ನು ನೀಡಿದ್ದಾರೆ. ಇನ್ನೊಂದೆಡೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬಂದಿತ್ತಾದರೂ ಕೂಡ ಖರ್ಗೆ ತಾನು ಸಿಎಂ ಆಗಲಾರೆ ಎಂದಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರು ಸಿಎಂ ಆಗಬೇಕು. ದಲಿತ ಖೋಟಾದಡಿ ಯಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಅಂತಾ ಬೆಂಬಲಿಗರು ದಾಳ ಉರುಳಿಸಿದ್ದಾರೆ. ಈ ನಡುವಲ್ಲೇ ಲಿಂಗಾಯಿತ ಮುಖಂಡ ಎಂಬಿ ಪಾಟೀಲ್‌ ಕೂಡ ಸಿಎಂ ಆಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಕೆಲವೊಂದು ಸಮೀಕ್ಷೆಗಳು ಈಗಾಗಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಅಂತಾ ಹೇಳಿದ್ರೆ, ಕೆಲವು ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಹೀಗಾಗಿ ನಾಳೆ ಮತದಾರ ಪ್ರಭು ಯಾರಿಗೆ ಮಣೆಹಾಕಿದ್ದಾನೆ ಅನ್ನೋದು ನಿರ್ಧಾರವಾಗಲಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಅತಂತ್ರ ಸರಕಾರ : ಏನ್‌ ಹೇಳುತ್ತೆ EXIT POLL

ಇದನ್ನೂ ಓದಿ : Karnataka exit poll 2023 : ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ? ಯಾವ ಪಕ್ಷಕ್ಕೆ ಅಧಿಕಾರ ?

Karnataka assembly election 2023 Who is Karnataka CM Siddaramaiah DK Shivakumar and Priyanka Kharge in Congress Race

Comments are closed.