ಬಸವನಗುಡಿಯಲ್ಲಿ ಬಿಜೆಪಿ Vs ಜೆಡಿಎಸ್‌ ಬಿಗ್‌ ಫೈಟ್‌ : ಕಾಂಗ್ರೆಸ್‌ ಆಟಕುಂಟು ಲೆಕ್ಕಕ್ಕಿಲ್ಲ

ಬೆಂಗಳೂರು : Karnataka Election 2023 : ಬಸವನಗುಡಿ ವಿಧಾನಸಭಾ ಕ್ಷೇತ್ರ (Basavanagudi mla constituency) ಬೆಂಗಳೂರಿನ ಇತರ ವಿಧಾನಸಭಾ ಕ್ಷೇತ್ರಗಳಿಂದ ವಿಶಿಷ್ಟ. ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ದೃಷ್ಟಿಯಿಂದಲೂ ಖ್ಯಾತಿಯನ್ನು ಪಡೆದುಕೊಂಡಿದೆ. ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಿಂದಲೂ ಬಿಜೆಪಿಯ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್‌ ಮೂರನೇ ಸ್ಥಾನ್ಕಕೆ ತೃಪ್ತಿಪಟ್ಟುಕೊಂಡಿದೆ. ಇದೀಗ ಕಳೆದ ಬಾರಿಯ ಲೆಕ್ಕಾಚಾರವೇ ಕ್ಷೇತ್ರದಲ್ಲಿ ನಡೆಯುತ್ತಿದ್ದಂತೆ ಕಂಡುಬರುತ್ತಿದೆ.

ಬಸವನಗುಡಿ (Basavanagudi mla constituency) ಶಾಸಕ ರವಿ ಸುಬ್ರಹ್ಮಣ್ಯ ವಿರುದ್ದ ಹಲವು ಆರೋಪಗಳು ಕೇಳಿಬಂದಿದ್ದು, ಮಾಜಿ ಕೇಂದ್ರ ಸಚಿವ ಅನಂತ ಕುಮಾರ್‌ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಬಿಜೆಪಿ ಹಾಲಿಶಾಸಕ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್‌ ನೀಡಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರು ಕೂಡ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಮತ್ತು ಒಕ್ಕಲಿಗರ ನಡುವೆ ಬಿಗ್‌ ಫೈಟ್‌ ನಡೆಯಲಿದೆ. ಬಿಜೆಪಿ ಪಕ್ಷದ ರವಿಸುಬ್ರಹ್ಮಣ್ಯ ಮತ್ತು ಕಾಂಗ್ರೆಸ್‌ ಪಕ್ಷದ ಯು.ಬಿ.ವೆಂಕಟೇಶ್‌ ಇಬ್ಬರೂ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಇನ್ನು ಜೆಡಿಎಸ್‌ ಅಭ್ಯರ್ಥಿ ಅರಮನೆ ಶಂಕರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಆಮ್‌ ಆದ್ಮಿ ಪಾರ್ಟಿಯಲ್ಲಿದ್ದ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಆಮ್‌ ಆದ್ಮಿ ಪಕ್ಷವನ್ನು ತೊರೆದು ಚಾಮರಾಜಪೇಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಪಕ್ಕದ ಕ್ಷೇತ್ರದ ಅಭ್ಯರ್ಥಿಯಾಗಿರುವ ಭಾಸ್ಕರ್‌ ರಾವ್‌ ಅವರ ಪ್ರಭಾವ ಕ್ಷೇತ್ರದ ಮೇಲೆಯೂ ಇದೆ. ರವಿ ಸುಬ್ರಹ್ಮಣ್ಯ ಅವರ ಗೆಲುವಿಗೆ ಭಾಸ್ಕರ್‌ ರಾವ್‌ ಕಸರತ್ತು ನಡೆಸುತ್ತಿದ್ದಾರೆ.

ಇನ್ನು ಬಸವನಗಡಿ ವಿಧಾನಸಭಾ ಕ್ಷೇತ್ರದಲ್ಲಿ (Basavanagudi mla constituency) ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಮಾಜಿ ಮೇಯರ್‌ ಆಗಿದ್ದ ಚಂದ್ರಶೇಖರ್‌ ಇತ್ತೀಚಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ಸನಿಹಕ್ಕೂ ಬಂದಿಲ್ಲ. ಚದುರಿ ಹೋಗಿರುವ ಕಾಂಗ್ರೆಸ್‌ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಒಗ್ಗೂಡಿಸುವ ಕಾರ್ಯ ನಡೆಸಲಾಗಿದೆ. ಆದರೆ ಹಲವು ನಾಯಕರ ವೈಮನಸ್ಸು ಪಕ್ಷದ ಗೆಲುವಿಗೆ ತೊಡಕಾಗುವ ಸಾಧ್ಯತೆಯಿದೆ. ಇನ್ನು ಜೆಡಿಎಸ್‌ ಪಕ್ಷ ಬಸವನಗುಡಿಯಲ್ಲಿ ಪ್ರಾಬಲ್ಯ ಹೊಂದಿದೆ. ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರಿದ್ದಾರೆ. ಇನ್ನೊಂದೆಡೆಯಲ್ಲಿ ಜೆಡಿಎಸ್‌ ಪಕ್ಷ ಕ್ಷೇತ್ರದಲ್ಲಿ ಸುಮಾರು 35 ಸಾವಿರ ಮತಗಳನ್ನು ಹೊಂದಿದೆ. ಈ ಬಾರಿಗೆ ಒಕ್ಕಲಿಗರು ಜೆಡಿಎಸ್‌ ಪರ ನಿಂತ್ರೆ ಜೆಡಿಎಸ್‌ ಪಕ್ಷಕ್ಕೆ ಗೆಲುವು ಕಷ್ಟವೇನಲ್ಲಾ. ಆದರೆ ಕ್ಷೇತ್ರದ ಹಾಲಿ ಶಾಸಕ ರವಿಸುಬ್ರಹ್ಮಣ್ಯ ಕಳೆದ ಮೂರು ಅವಧಿಯಲ್ಲಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇನ್ನು ಕಳೆದ ಅವಧಿಯಲ್ಲಿ ನಡೆದಿರುವ ಕೊರೊನಾ ಲಸಿಕೆ ಗೋಲ್ಮಾಲ್‌ನಲ್ಲಿ ಶಾಸಕರ ಹೆಸರು ಕೇಳಿಬಂದಿದ್ದರೂ ಕೂಡ ಆರೋಪವನ್ನು ತಳ್ಳಿಹಾಕಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಗೆಲುವಿನ ಕನಸು ಕಾಣುತ್ತಿದ್ದರೂ ಕೂಡ ಬ್ರಾಹ್ಮಣ ಹೊರತು ಪಡಿಸಿ ಉಳಿದ ಸಮುದಾಯದ ಮತಗಳನ್ನು ಸೆಳಯುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಮತ ಪ್ರಚಾರ ಬಸವನಗುಡಿ ಕ್ಷೇತ್ರದ ಮೇಲೆ ಪರಿಣಾಮ ಬೀರುವುದು ಖಚಿತ. ಜೊತೆಗೆ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ರವಿಸುಬ್ರಹ್ಮಣ್ಯ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಬಸವನಗುಡಿಯಿಂದ ಯಾರೆಲ್ಲಾ ಶಾಸಕರಾಗಿದ್ದಾರೆ ?

1852 ರಲ್ಲಿ ಭಾರತೀಯ ಕಾಂಗ್ರೆಸ್‌ ಪಕ್ಷದ ಪಿ.ಆರ್.ರಾಮಯ್ಯ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಎಲ್.ಎಸ್.‌ ವೆಂಕಾಜಿರಾವ್‌ ಹಾಗೂ ಎಂ.ಕೃಷ್ಣಪ್ಪ ಸತತವಾಗಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ತಿಮ್ಮಯ್ಯ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಸೋಲಿನ ರುಚಿ ತೋರಿಸಿದ್ದರು. ಆದರೆ 1972 ರಲ್ಲಿ ಅಮೀರ್‌ ರಹಮತುಲ್ಲ ಖಾನ್‌ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1978 ರಲ್ಲಿ ಟಿ.ಆರ್.ಶಾಮಣ್ಣ ಮೊದಲ ಬಾರಿಗೆ ಕ್ಷೇತ್ರದಲ್ಲಿ ಜನತಾ ಪಕ್ಷದ ಬಾವುಟ ಹಾರಿಸಿದರು. ನಂತರದಲ್ಲಿ ಜನತಾ ಪಕ್ಷದಿಂದ ಎಚ್.ಎಲ್.ತಿಮ್ಮೆಗೌಡ ಸತತ ಎರಡನೇ ಬಾರಿ ಆಯ್ಕೆಯಾಗಿದ್ದರು. ತದನಂತರದಲ್ಲಿ ಜನತಾದಳದಿಂದ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 1985 ಮತ್ತು 1989 ರಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ 1994 ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಚ್.ಎನ್.ನಂಜೇಗೌಡ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಖಾತೆ ತೆರೆದಿತ್ತು. 1999ರಲ್ಲಿ ಬಿಜೆಪಿಯ ಕೆ.ಎನ್.ಸುಬ್ಬಾರೆಡ್ಡಿ ಶಾಸಕರಾದ್ರೆ, 2008 ರಲ್ಲಿ ಕೆ.ಚಂದ್ರಶೇಖರ್‌ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸುಮಾರು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿ ಗೆಲುವು ದಾಖಲಿಸಿತ್ತು. ಆದರೆ ತದನಂತರದಲ್ಲಿ 2008 ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ರವಿಸುಬ್ರಹ್ಮಣ್ಯ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕಳೆದ ಚುನಾವಣೆಯ ಲೆಕ್ಕಾಚಾರ :

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ರವಿಸುಬ್ರಹ್ಮಣ್ಯ, ಜೆಡಿಎಸ್‌ನಿಂದ ಕೆ.ಬಾಗೇಗೌಡ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಎಂ.ಬೋರೇಗೌಡ ಸ್ಪರ್ಧೆ ಮಾಡಿದ್ದರು. ಬಿಜೆಪಿಯ ರವಿಸುಬ್ರಹ್ಮಣ್ಯ 76,018 ಮತಗಳನ್ನು ಪಡೆದುಕೊಂಡ್ರೆ, ಜೆಡಿಎಸ್‌ನ ಕೆ.ಬಾಗೇಗೌಡ 38,009 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಎಂ.ಬೊರೇಗೌಡ 11,767 ಮತಗಳನ್ನು ಪಡೆಯುವ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಮೂರು ಚುನಾವಣೆಗಳಲ್ಲಿಯೂ ತಮ್ಮ ಗೆಲುವಿನ ಅಂತವನ್ನು ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

ಇದನ್ನೂ ಓದಿ : ಬೈಂದೂರಲ್ಲಿ ಪೂಜಾರಿ Vs ಬಂಟರ ಕದನ; ಗೋಪಾಲ ಪೂಜಾರಿ ಎದುರು ಗೆಲ್ತಾರಾ ಗುರುರಾಜ್‌ ಗಂಟಿಹೊಳೆ ?

ಜಾತೀವಾರು ಲೆಕ್ಕಾಚಾರ ಹೇಗಿದೆ ?

ಒಟ್ಟು ಮತದಾರರು : 2,36,600
ಒಕ್ಕಲಿಗ : 67,000
ಬ್ರಾಹ್ಮಣ : 65,000
ಲಿಂಗಾಯತ : 4000
ಒಬಿಸಿ : 20,500
ಎಸ್‌ಸಿ-ಎಸ್‌ಟಿ : 34,500
ಮುಸ್ಲಿಂ : 6,500
ಇತರೇ : 39,100
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಒಕ್ಕಲಿಗರು ಈ ಬಾರಿ (Karnataka Election 2023) ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಉಳಿದಂತೆ ಒಬಿಸಿ, ಎಸ್‌ಸಿ ಎಸ್‌ಟಿ ಮತಗಳ ಮೇಲೆ ಚುನಾವಣೆ ನಿರ್ಧಾರವಾಗಲಿದೆ. ಬಿಜೆಪಿಯ ರವಿಸುಬ್ರಹ್ಮಣ್ಯ, ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಇಬ್ಬರೂ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಆದರೆ ಜೆಡಿಎಸ್‌ನ ಅರಮನೆ ಶಂಕರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ ಹಾಲಿ ಶಾಸಕ ರವಿಸುಬ್ರಹ್ಮಣ್ಯ ಹಾಗೂ ಜೆಡಿಎಸ್‌ನ ಅರಮನೆ ಶಂಕರ್‌ ನಡುವೆ ನೇರಾ ಹಣಾಹಣಿ ಸೇರ್ಪಡುವ ಸಾಧ್ಯತೆಯಿದೆ.

ಯಾರೆಲ್ಲಾ ಕಣದಲ್ಲಿದ್ದಾರೆ ?

ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರವಿಸುಬ್ರಹ್ಮಣ್ಯ ನಾಲ್ಕನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್‌ ಈ ಬಾರಿ ಅರಮನೆ ಶಂಕರ್‌ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಪಕ್ಷದಿಂದ ವಿಧಾನಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌, ಆಮ್‌ಆದ್ಮಿ ಪಾರ್ಟಿಯಿಂದ ಸತ್ಯಲಕ್ಷ್ಮೀ ರಾವ್‌, ಕರ್ನಾಟಕ ರಾಷ್ಟ್ರ ಸಮತಿಯಿಂದ ಎಲ್.ಜೀವನ್‌, ಜೈಮಹಾ ಭಾರತ್‌ ಪಾರ್ಟಿಯಿಂದ ದಿಲೀಪ್‌ ಎಂ., ಸ್ವಯಂ ಕೃಷಿ ಪಾರ್ಟಿಯಿಂದ ನಾಗಮುನಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಡಾ.ರಜನಿ ಜೆ., ಅಲ್ಲದೇ ಪಕ್ಷೇತರರಾಗಿ ಅಶ್ವತ್‌ ಕುಮಾರ್‌, ಯೋಗೀಶ್‌, ಶ್ರೇಯಸ್‌, ಬಿ.ಎಸ್.‌ಸತ್ಯನಾರಾಯಣ ಸ್ಪರ್ಧೆ ಮಾಡಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಸವನಗುಡಿ ಕ್ಷೇತ್ರದಲ್ಲಿ ಒಟ್ಟು ಹನ್ನೆರಡು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತಮ ಪ್ರಜಾಕೀಯ, ಕೆಆರ್‌ಎಸ್‌ ಹಾಗೂ ಆಮ್‌ ಆದ್ಮಿ ಪಕ್ಷಗಳು ಸ್ಪರ್ಧೆ ಮಾಡಿವೆ. ಹಲವು ಸಮೀಕ್ಷೆಗಳ ಲೆಕ್ಕಾಚಾರವನ್ನು ನೋಡಿದ್ರೆ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ : ಮೋದಿ ಮೆಗಾ ರೋಡ್ ಶೋ: ಮೂರು ದಿನ ರಾಜ್ಯದಲ್ಲಿ ಪ್ರಧಾನಿ ಮತಬೇಟೆ

ಇದನ್ನೂ ಓದಿ : ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರಿಗೆ ಅಭಯ ನೀಡಿದ ಪಂಜುರ್ಲಿ ದೈವ

Comments are closed.