ಸಮೀಕ್ಷೆಗೆ ಬಿಜೆಪಿ ಪಡೆ ತತ್ತರ : ರಾಜಧಾನಿಗೆ ನಾಯಕರ ದೌಡು ಮಹತ್ವದ ಸಭೆ

ಬೆಂಗಳೂರು : ಪಕ್ಷಗಳ ನಡುವಿನ ಮೇಲಾಟ, ರಂಗುರಂಗಿನ ಆಮಿಷಗಳ ನಡುವೆಯೂ ಕರ್ನಾಟಕದ ವಿಧಾನಸಭಾ ಚುನಾವಣೆ ಯಶಸ್ವಿಯಾಗಿ (Karnataka Post Election Survey) ಮುಗಿದಿದೆ. ಈ ಮಧ್ಯೆ ಚುನಾವಣೋತ್ತರ ಬಹುತೇಕ ಸಮೀಕ್ಷೆಗಳು ಹಸ್ತಕ್ಕೆ ಅಧಿಕಾರ ಎಂದಿದ್ದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ಕಮಲ ಪಾಳಯದ ನಾಯಕರು ರಾಜ್ಯ ರಾಜಧಾನಿಗೆ ದೌಡಾಯಿಸಿದ್ದಾರೆ.

ರಾಜ್ಯದಲ್ಲಿ ನಡೆದ ವಿಧಾನಸಭೆಯ ಮತದಾನದ ಕೆಲವೇ ಗಂಟೆಗಳಲ್ಲಿ ಹಲವು ಸಂಸ್ಥೆಗಳು ಹಾಗೂ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ಈ ಸಮೀಕ್ಷೆಗಳ ಪೈಕಿ ಅತಿ ಹೆಚ್ಚು ಸಮೀಕ್ಷೆಗಳು ಕಾಂಗ್ರೆಸ್ ಕೈ ಗೆ ಅಧಿಕಾರ ನೀಡಿದ್ದು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದೆ.

ಈ ಸಮೀಕ್ಷೆಗಳು ಮತ್ತೊಮ್ಮೆ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿಸಿಎಂ ಬಿಎಸ್ವೈ ಸೇರಿದಂತೆ ಎಲ್ಲ ಪ್ರಮುಖ ನಾಯಕರು ಬೆಂಗಳೂರಿನತ್ತ ಮುಖ‌ಮಾಡಿದ್ದಾರೆ. ಬೂತ್ ಮಟ್ಟದ ಓಟಿಂಗ್ ಸೇರಿದಂತೆ ಒಟ್ಟಾರೆ ಮತದಾನದ ಮಾಹಿತಿ ಪಡೆದು ಸಮೀಕ್ಷೆಗಳ ಜೊತೆ ಹೋಲಿಕೆ ಮಾಡಿ ಫಲಿತಾಂಶದ ಲೆಕ್ಕಾಚಾರ ಹಾಕಿ ಮುಂದಿನ ನಡೆ ತೀರ್ಮಾನ ಬಿಜೆಪಿ ನಾಯಕರ ಸದ್ಯದ ಅಜೆಂಡಾ.

ಮೋದಿ,ಅಮಿತ್ ಶಾ ಸೇರಿದಂತೆ ಕೇಂದ್ರದ ಘಟಾನುಘಟಿ ನಾಯಕರು ರಾಜ್ಯದಲ್ಲಿ ಬಿಡುವಿಲ್ಲದ ಪ್ರಚಾರ ಮಾಡಿದ್ದಾರೆ. ಜಾತಿ ಲೆಕ್ಕಾಚಾರ, ಪ್ರಾದೇಶಿಕ ಬೇಡಿಕೆಗಳು,ಬಜೆಟ್ ಹೀಗೆ ನಾನಾ ರೀತಿಯಲ್ಲಿ ಸರ್ಕಸ್ ಮಾಡಿ ಬಿಜೆಪಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಅಲ್ಲದೇ ಡಬ್ಬಲ್ ಇಂಜಿನ್ ಸರ್ಕಾರ ಎಂಬುದನ್ನೇ ಮಂತ್ರ ವಾಗಿಟ್ಟುಕೊಂಡು ಅಭಿವೃದ್ಧಿ ಹೊಸ ಅಲೆಯನ್ನು ಸೃಷ್ಟಿಸುವ ಭರವಸೆ ನೀಡಿದೆ. ಹೀಗಿದ್ದಾಗ್ಯೂ ಒಂದೊಮ್ಮೆ ಬಿಜೆಪಿ ಕನಿಷ್ಠ. 110-120 ಸೀಟ್ ಗಳನ್ನು ಪಡೆಯುವಲ್ಲಿ ವಿಫಲವಾದರೇ ಇದು ರಾಜ್ಯ ಬಿಜೆಪಿ ಪಾಳಯಕ್ಕೆ ತೀವ್ರ ಮುಜುಗರದ ಸಂಗತಿ.

ಹೀಗಾಗಿ ಚುನಾವಣೆಯ ಫಲಿತಾಂಶದ ಲೆಕ್ಕಾಚಾರಕ್ಕೆ ಬಿಜೆಪಿ ನಾಯಕರು ಬೆಂಗಳೂರಿಗೆ ಧಾವಿಸಿದ್ದಾರೆ. ಎಲ್ಲರೂ ಒಂದಾಗಿ ಒಂದೊಮ್ಮೆ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೇ ಏನೆಲ್ಲ ತಂತ್ರಗಳನ್ನು ಹೂಡಿ ಅಧಿಕಾರ ಪಡೆದುಕೊಳ್ಳಬಹುದು? ಆಫರೇಶನ್ ಕಮಲಕ್ಕೆ ಆಸ್ಪದ ಇದೆಯೆ? ಹಾಗಿದ್ದರೇ ಯಾರನ್ನೆಲ್ಲ ಸಂಪರ್ಕಿಸಬಹುದು ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಬಿಜೆಪಿ ನಾಯಕರ ಚರ್ಚೆ ನಡೆಯಲಿದೆ.

ಇದನ್ನೂ ಓದಿ : ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್‌ ಬ್ಲಾಕ್‌ ಮೇಲ್‌ : ರಮೇಶ್‌ ಜಾರಕಿಹೊಳಿ ಆರೋಪ

ಈ ಮಧ್ಯೆ ಮತದಾನದ ಬಳಿಕ ಟೆಂಪಲ್ ರನ್ ಆರಂಭಿಸಿರುವ ಸಿಎಂ ಈಗಾಗಲೇ‌ ಸ್ಟೇಟ್ ಇಂಟಲಿಜನ್ಸ್ ವರದಿ ಪಡೆದುಕೊಂಡಿದ್ದು, ಗುಪ್ತಚರ ಇಲಾಖೆ ಬಿಜೆಪಿ ಸ್ಪಷ್ಟವಾದ ಬಹುಮತ ತಲುಪಲಾಗದೇ ಇದ್ದರೂ ಬಿಜೆಪಿ ಬಹುಮತದ ಸನಿಹ ತಲುಪಲಿದೆ ಎಂಬ ಮಾಹಿತಿ ನೀಡಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಚುನಾವಣೆ ಬಳಿಕ ಹೊರಬಿದ್ದಿರೋ ಸಮೀಕ್ಷೆ ಬಿಜೆಪಿ ನಾಯಕರ ಎದೆಯಲ್ಲಿ ನಡುಕ ಮೂಡಿಸಿದ್ದು, ಸಭೆ ಮೇಲೆ ಸಭೆ ನಡೆಸಿ ಮುಂದಿನ ರಣತಂತ್ರ ಸಿದ್ಧಪಡಿಸುತ್ತಿದ್ದಾರೆ.

Karnataka Post Election Survey: BJP forces for the poll: Leaders rush to the capital for an important meeting

Comments are closed.