ಬೀಜಿಂಗ್: ಕೊರೋನಾ ಬಳಿಕ ಮಹಾಮಳೆಗೆ ಚೀನಾ ತತ್ತರಿಸಿದ್ದು, ಮೆಟ್ರೋ ಸುರಂಗದೊಳಕ್ಕೆ ನೀರು ನುಗ್ಗಿದ ಪರಿಣಾಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ 12 ಪ್ರಯಾಣಿಕರು ಸಾವನ್ನಪ್ಪಿದ್ದು, 5 ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧ್ಯ ಚೀನಾದ ಝೆಂಗ್ ಝೋ ನಗರದ ಮೆಟ್ರೋ ಸುರಂಗದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಇದರಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಐವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಟ್ರೋ ಸುರಂಗದ ಪ್ರವಾಹದಲ್ಲಿ ಸಿಲುಕಿದ ಜನರು ರಕ್ಷಣೆಗಾಗಿ ಕೂಗಿಕೊಳ್ಳುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೀನಾದ ಬೀಜಿಂಗ್ ಮತ್ತು ಹೆನಾನ ಪ್ರಾಂತ್ಯದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಈಗಾಗಲೇ 1 ಕೋಟಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತಿರಸಲಾಗಿದೆ. ಪ್ರವಾಹ ಸ್ಥಳದಲ್ಲಿ ರಕ್ಷಣಾ ಕಾರ್ಯನಡೆದಿದ್ದು, ಎಚ್ಚರಿಕೆ ವಹಿಸುವಂತೆ ಸರ್ಕಾರ ಜನರಿಗೆ ಸೂಚಿಸಿದೆ.

ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾಗು ಬೆಳೆ ನಾಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.