Indians in Ukraine : ನೀರಿಲ್ಲ, ಆಹಾರವಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಉಕ್ರೇನ್ ನಲ್ಲಿ ಭಾರತೀಯರ ಗೋಳು ಕೇಳೋರಿಲ್ಲ

ನವದೆಹಲಿ : ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಇದರ ಕಾರ್ಮೋಡ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಿಸಿದೆ. ವಿದ್ಯಾಭ್ಯಾಸ ಕ್ಕಾಗಿ ತೆರಳಿದ ರಾಜ್ಯದ ಸಾವಿರಾರು ಮಕ್ಕಳು ಉಕ್ರೇನ್ ನಲ್ಲಿ ಸಿಲುಕಿದ್ದು ವಾಪಸ್ ಬರಲಾಗದೇ ಅಲ್ಲಿಯೂ ಇರಲಾರದೇ (Indians in Ukraine) ಪರದಾಡುತ್ತಿದ್ದಾರೆ. ರಾಯಚೂರು, ಕೊಪ್ಪಳ, ಗದಗ, ಬೀದರ, ಕಾರವಾರ, ಚಿತ್ರದುರ್ಗ,ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ನೂರಾರು ಮಕ್ಕಳು ಉಕ್ರೇನ್ ನಲ್ಲಿದ್ದಾರೆ. ಬುಧವಾರದವರೆಗೂ ನಿಯಂತ್ರಣದಲ್ಲಿದ್ದ ಪರಿಸ್ಥಿತಿ ಗುರುವಾರ ಮುಂಜಾನೆಯ ವೇಳೆಗೆ ಬಿಗಡಾಯಿಸಿದೆ.ಎಲ್ಲೆಡೆ ಬಾಂಬ್ ಬ್ಲ್ಯಾಸ್ಟ್ ಹಾಗೂ ಕ್ಷಿಪಣಿ ದಾಳಿಯ ಸದ್ದು ಕೇಳಲಾರಂಭಿಸಿದೆ.

ರಾಜ್ಯದಿಂದ ಉಕ್ರೇನ್ ಗೆ ತೆರಳಿರುವ ಬಹುತೇಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಅಭ್ಯಾಸಕ್ಕೆ ತೆರಳಿದವರಾಗಿದ್ದು ಅಫ್ ಲೈನ್ ತರಗತಿಗಳು ನಡೆಯುತ್ತಿದ್ದರಿಂದ ಯುದ್ಧ ಭೀತಿಯ ನಡುವೆಯೂ ಅಲ್ಲಿಯೇ ಶಿಕ್ಷಣ ಮುಂದುವರೆಸಿದ್ದರು. ಆದರೆ ಈಗ ಉಕ್ರೇನ್ ನಾದ್ಯಂತ ಜೀವಭಯದ ವಾತಾವರಣ ಸೃಷ್ಟಿಯಾಗಿದೆ. ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಬಂಕರ್ ಗಳು ಹಾಗೂ ಮೆಟ್ರೋ‌ಸ್ಟೇಶನ್ ನ ಅಂಡರ್‌ಪಾಸ್ ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಆದರೆ ಈ ವಿದ್ಯಾರ್ಥಿಗಳು ಭಾರತಕ್ಕೆ ಮರಳುವ ಹಾದಿ ದುರ್ಗಮವಾಗಿದೆ. ಬಹುತೇಕ ವಿದ್ಯಾರ್ಥಿಗಳು ಪ್ಲೈಟ್ ಟಿಕೇಟ್ ಬುಕ್ ‌ಮಾಡಿಸಿದ್ದರು. ಆದರೆ ಯುದ್ಧ ಘೋಷಣೆ ಯಿಂದ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಅಲ್ಲದೇ ಫ್ಲೈಟ್ ಟಿಕೇಟ್ ದರಗಳು ಗಗನಕ್ಕೇರಿವೆ. ಈ‌ಮಧ್ಯೆ ಉಕ್ರೇನ್ ನ ಬೀದಿಗಳಲ್ಲಿ ಊಟ,ಆಹಾರ, ಕುಡಿಯುವ ನೀರು ದಿನಬಳಕೆ ವಸ್ತುಗಳು ಹಾಗೂ ಹಣಕ್ಕಾಗಿ ಹಾಹಾಕಾರವೆದ್ದಿದ್ದು ಜನರು ಕುಡಿಯುವ ನೀರು, ಹಣಕ್ಕಾಗಿ ಕ್ಯೂ ನಿಂತಿದ್ದಾರೆ.

ಇನ್ನೊಂದೆಡೆ ಭಾರತೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳನ್ನು ಸಂಪರ್ಕಿಸುವಲ್ಲಿ ಭಾರತೀಯ ವಿದೇಶಾಂಗ ಕಚೇರಿ ವಿಫಲವಾಗ್ತಿದೆ. ಭಾರತೀಯ ವಿದೇಶಾಂಗ ಕಚೇರಿಯಿಂದ ಯಾವುದೇ ಸಹಾಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕುರುಬಹಳ್ಳಿಯ ನಿವಾಸಿ ಪೂರ್ಣಿಮಾ ಎಂಬುವವರ ಮಗಳು ರುಚಿರಾ‌ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಉಕ್ರೇನ್ ನ ಬಂಕರ್ ವೊಂದರಲ್ಲಿ ಆಶ್ರಯ ಪಡೆದಿದ್ದಾರೆ.ಆದರೆ ಆಹಾರವಿಲ್ಲದೇ ಪರದಾಡುವ ಸ್ಥಿತಿ ಇದೆ. ಆದರೆ ರಾಯಭಾರ ಕಚೇರಿ ಈ ಮಕ್ಕಳನ್ನು ಇನ್ನು ಸಂಪರ್ಕಿಸಿಲ್ಲ.

ಅಲ್ಲಿಂದ ರುಚಿರಾ ಸೇರಿದಂತೆ ಹಲವು ವಿದ್ಯಾರ್ಥಿಗಳು ತಮ್ಮ ಸಂಕಷ್ಟದ ವಿಡಿಯೋ ಹಂಚಿಕೊಂಡಿದ್ದು‌ಮಗಳ ಸ್ಥಿತಿ ಕಂಡು ಹೆತ್ತವರು ಕಣ್ಣೀರಾಗಿದ್ದಾರೆ. ಇನ್ನು ಹಾವೇರಿಯ ಪ್ರವೀಣ್ ರೆಡ್ಡಿ, ನೆಲಮಂಗಲದ ನವ್ಯಶ್ರೀ ಸೇರಿದಂತೆ ಹಲವು ವಿದ್ಯಾರ್ಥಿಗಳು ಇದೇ ಪರಿಸ್ಥಿತಿಯಲ್ಲಿದ್ದು ವಿಡಿಯೋಗಳ ಮೂಲಕ ತಮ್ಮ ಸಂಷಕ್ಟ ತೋಡಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಧ್ಯಪ್ರವೇಶ ಮಾಡಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರಬೇಕೆಂಬ ಒತ್ತಡ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ರಷ್ಯಾ ಉಕ್ರೇನ್ ಯುದ್ಧ: ಭಾರತೀಯರ ಮೇಲೆ ಏನೇನು ಪರಿಣಾಮವಾಗಲಿದೆ ?

ಇದನ್ನೂ ಓದಿ : ರಷ್ಯಾ vs ಉಕ್ರೇನ್: ದಾಯಾದಿ ದೇಶಗಳ ಸೇನೆಗಳ ಬಲಾಬಲವೇನು ?

(No water, no food, no money at the ATM : groans of Indians in Ukraine)

Comments are closed.