ರಸಂ ಅಥವಾ ಸಾಂಬಾರು ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಅಲ್ವಾ…? ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವಂತಹ ಬೇಬಿ ಕಾರ್ನ್ ಪೆಪ್ಪರ್ ಫ್ರೈ (baby corn pepper fry recipe) ಮಾಡುವ ವಿಧಾನ ಇದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟವಾಗುತ್ತದೆ. ರೈಸ್ ಬಾತ್ ಜತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ ಮಾಹಿತಿ.

ಬೇಕಾಗುವ ಸಾಮಗ್ರಿಗಳು:
12-ಬೇಬಿ ಕಾರ್ನ್, 2- ಹದ ಗಾತ್ರದ ಈರುಳ್ಳಿ, 4 ಎಸಳು-ಬೆಳ್ಳುಳ್ಳಿ, ½ ಟೀ ಸ್ಪೂನ್-ಖಾರದ ಪುಡಿ, 1 ½ ಟೀ ಸ್ಪೂನ್-ಕಾಳುಮೆಣಸಿನ ಪುಡಿ, 1 ½ ಟೀ ಸ್ಪೂನ್-ಟೊಮೆಟೊ ಕೆಚಪ್, ಉಪ್ಪು-ಅಗತ್ಯವಿರುವಷ್ಟು.
ಒಗ್ಗರಣೆಗೆ : 1 ಟೇಬಲ್ ಸ್ಪೂನ್-ಎಣ್ಣೆ, ½ ಟೀ ಸ್ಪೂನ್-ಸಾಸಿವೆ, ಸ್ವಲ್ಪ-ಕರಿಬೇವು, 1 ಟೀ ಸ್ಪೂನ್- ಜೀರಿಗೆ.

ಮಾಡುವ ವಿಧಾನ:
ಮೊದಲಿಗೆ ಬೇಬಿ ಕಾರ್ನ್ ಅನ್ನು ಚೆನ್ನಾಗಿ ತೊಳೆಯಿರಿ. ನಂತರ ಉದ್ದಕ್ಕೆ ತೆಳುವಾಗಿ ಕತ್ತರಿಸಿಕೊಳ್ಳಿ. ಕುಕ್ಕರ್ ಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಕತ್ತರಿಸಿಕೊಂಡ ಬೇಬಿಕಾರ್ನ್ ಹಾಕಿ ಸ್ವಲ್ಪ ಉಪ್ಪು ಸೇರಿಸಿ ಒಂದು ವಿಷಲ್ ಕೂಗಿಸಿಕೊಳ್ಳಿ. ಒಂದಕ್ಕಿಂತ ಜಾಸ್ತಿ ವಿಷಲ್ ಬೇಡ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ, ಜೀರಿಗೆ ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿಬೇವು ಸೇರಿಸಿ. ನಂತರ ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಈರುಳ್ಳಿಯನ್ನು ಸೇರಿಸಿ ಕೆಂಪಗೆ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಕೆಂಪಾಗುತ್ತಿದ್ದಂತೆ ಅದಕ್ಕೆ ಬೇಯಿಸಿಕೊಂಡ ಬೇಬಿಕಾರ್ನ್ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಹಾಗೇ ಕೆಚಪ್, ಕಾಳುಮೆಣಸಿನ ಪುಡಿ. ಖಾರದ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ರುಚಿಯಾದ ಬೇಬಿ ಕಾರ್ನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧವಾಗುತ್ತದೆ.
ಇದನ್ನೂ ಓದಿ : ಚಾಕುವಿನ ಹತ್ತು ಕರಾಮತ್ತುಗಳು ! ತರಕಾರಿ ಮತ್ತು ಹಣ್ಣುಗಳನ್ನು ಹೀಗೆ ಆಕರ್ಷಕವಾಗಿ ಕತ್ತರಿಸಿ!
ಇದನ್ನೂ ಓದಿ : ಹುರುಳಿ ಕಾಳಿನ ದಿಢೀರ್ ಸಾರು! ಮಾಡುವುದು ಹೇಗೆ ಗೊತ್ತೇ?
baby corn pepper fry recipe