ಸಂಜೆಯ ಸಮಯದಲ್ಲಿ ಸಣ್ಣವರಿಂದ ದೊಡ್ಡವರವರೆಗೂ ಏನಾದರೂ ಕುರುಕಲು ತಿಂಡಿ ತಿನ್ನಬೇಕು ಅನಿಸುತ್ತದೆ. (Crispy Kharaboondi Recipe) ಸಂಜೆಯ ಹೊತ್ತಿಗೆ ಹೆಚ್ಚಾಗಿ ಚಹಾ ಅಥವಾ ಕಾಫಿಯನ್ನು ಕುಡಿಯುವುದು ಸಾಮಾನ್ಯ. ಅದರಂತೆ ಶಾಲೆಯಿಂದ ಬಂದ ಮಕ್ಕಳು ಸಹ ಏನಾದರೂ ಕುರುಕಲು ತಿಂಡಿ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ ಎನ್ನುತ್ತಾರೆ. ಹಾಗಾಗಿ ಅಂಗಡಿ ಹಾಗೂ ಬೇಕರಿಯಲ್ಲಿ ಸಿಗುವ ಕುರುಕಲು ತಿಂಡಿಗಳು ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಯಾಕೆಂದರೆ ಆ ತಿಂಡಿ ತಿನಿಸುಗಳನ್ನು ಪ್ಯಾಕ್ ಮಾಡಿ ತುಂಬಾ ದಿನ ಕಳೆದಿರುತ್ತದೆ. ಅದನ್ನು ತಿನ್ನುವುದರಿಂದ ಹೊಟ್ಟೆ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರ ಬದಲು ಮನೆಯಲ್ಲೇ ನಾವು ಮಾಡಿ ತಿನ್ನಬಹುದಾಗಿದೆ. ಹಾಗಾದರೆ ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿ :
- ಕಡಲೆಹಿಟ್ಟು
- ಉಪ್ಪು
- ಅರಶಿನ ಪುಡಿ
- ಇಂಗು
- ಖಾರದಪುಡಿ
- ನೆಲಗಡಲೆ
- ಹುರಿಗಡಲೆ
- ಗೋಡಂಬಿ
- ಕರಿಬೇವಿನ ಸೊಪ್ಪು
ಮಾಡುವ ವಿಧಾನ :
ಮೊದಲಿಗೆ ಒಂದು ಬೌಲ್ಗೆ ಒಂದು ಕಪ್ ಕಡಲೆಹಿಟ್ಟನ್ನು ಹಾಕಿಕೊಳ್ಳಬೇಕು. ಅದಕ್ಕೆ ಒಂದು ಚಮಚ ಉಪ್ಪು, ದೊಡ್ಡ ಚಿಟಿಕೆ ಅರಶಿನ ಪುಡಿ, ದೊಡ್ಡ ಚಿಟಿಕೆ ಇಂಗಿನ ಪುಡಿ ಮತ್ತು ಅರ್ಧ ಚಮಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಆಮೇಲೆ ಅದೇ ಮಿಶ್ರಣಕ್ಕೆ ಒಂದು ಚಮಚ ಎಣ್ಣೆ(ಎಣ್ಣೆ ಬದಲು ಅಡುಗೆ ಸೋಡವನ್ನು ಬಳಸಬಹುದು)ಯನ್ನು ಬಿಸಿ ಮಾಡಿ ಹಾಕಿಕೊಳ್ಳಬೇಕು.
ಎಣ್ಣೆ ಹಾಕಿದ ಮೇಲೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ತೆಳುವಾಗಿರುವ ಉದ್ದಿನ ದೋಸೆಯ ಹಿಟ್ಟಿನ ಹದಕ್ಕೆ ಮಿಶ್ರಣವನ್ನು ರೆಡಿ ಮಾಡಿಕೊಳ್ಳಬೇಕು. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಬಿಸಿ ಮಾಡಿಕೊಳ್ಳಬೇಕು. ಅದೇ ಬಾಣಲೆಗೆ ಎಣ್ಣೆಯನ್ನು ಹಾಕಿ ಎಣ್ಣೆ ಸರಿಯಾಗಿ ಬಿಸಿ ಆದ ಮೇಲೆ ಕಣ್ಣು ಸೌಟನ್ನು ಬಳಸಿ ಅದರ ಮೇಲೆ ಹಿಟ್ಟನ್ನು ಹಾಕುವುದರೊಂದಿಗೆ ಎಣ್ಣೆಗೆ ಬಿಡಬೇಕು.
ಈ ಸೌಟನ್ನು ಬಳಸಿ ಹಿಟ್ಟನ್ನು ಎಣ್ಣೆಗೆ ಬಿಡುವುದರಿಂದ ಎಲ್ಲಾ ಬುಂದಿ ಒಂದೇ ಆಕಾರದಲ್ಲಿ ಬರುತ್ತದೆ. ಎಣ್ಣೆಗೆ ಬಿಟ್ಟ ಬುಂದಿ ಚೆನ್ನಾಗಿ ಗರಿಗರಿಯಾಗಿ ಬೆಂದ ಮೇಲೆ ಒಂದು ಪಾತ್ರೆಗೆ ತೆಗೆದು ಇಟ್ಟುಕೊಳ್ಳಬೇಕು. ನಂತರ ಅದೇ ಎಣ್ಣೆಯಲ್ಲಿ ಅರ್ಧ ಕಪ್ ನೆಲಗಡಲೆಯನ್ನು ಸ್ವಲ್ಪ ಹುರಿದು ರೆಡಿ ಮಾಡಿ ಇಟ್ಟುಕೊಂಡ ಬುಂದಿಗೆ ಹಾಕಿಕೊಳ್ಳಬೇಕು. ಆಮೇಲೆ ಅರ್ಧ ಕಪ್ ಹುರಿಗಡಲೆಯನ್ನು ಕೂಡ ಎಣ್ಣೆಯಲ್ಲಿ ಹುರಿದು ಬುಂದಿಗೆ ಹಾಕಬೇಕು.
ಇದನ್ನೂ ಓದಿ : Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್ ದೋಸೆ
ಇದನ್ನೂ ಓದಿ : Peas Paratha: ಚಳಿಗಾಲದ ಬೆಳಗ್ಗಿನ ತಿಂಡಿಗೆ ಮಾಡಿ ಬಿಸಿ ಬಿಸಿ ಬಟಾಣಿ ಪರಾಠ
ಇದನ್ನೂ ಓದಿ : kaju katli :ದುಬಾರಿ ಬೆಲೆಯ ಕಾಜು ಕಟ್ಲಿ ಮನೆಯಲ್ಲೇ ತಯಾರಿಸಿಕೊಳ್ಳಿ
ಇದನ್ನೂ ಓದಿ : Breakfast Drink : ಬೆಳಗ್ಗೆ ತಡವಾಗಿ ಎದ್ದಾಗ ಥಟ್ಟನೆ ಮಾಡಿ ಈ ಆರೋಗ್ಯಕರ ಬ್ರೇಕ್ ಪಾಸ್ಟ್ ಡ್ರಿಂಕ್
ನಂತರ ಎಣ್ಣೆಯಲ್ಲಿ ಗೋಡಂಬಿ ಮತ್ತು ಕರಿಬೇವಿನ ಎಲೆಗಳನ್ನು ಹುರಿದು ಬುಂದಿಗೆ ಸೇರಿಸಿಕೊಳ್ಳಬೇಕು. ಆಮೇಲೆ ರುಚಿ ನೋಡಿ ಉಪ್ಪು ಮತ್ತು ಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ರುಚಿಯಾದ ಗರಿಗರಿ ಖಾರ ಬುಂದಿ ತಿನ್ನಲು ಸಿದ್ಧವಾಗುತ್ತದೆ. ಇದನ್ನೂ ಚಹಾ ಮತ್ತು ಕಾಫಿ ಜೊತೆಯಲಿ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಖಾರಬುಂದಿಯನ್ನು ಚಿತ್ರಾನ್ನ, ಮೊಸರಾನ್ನ ಜೊತೆ ತಿನ್ನಲು ಇನ್ನೂ ರುಚಿಯಾಗಿರುತ್ತದೆ.
Crispy Kharaboondi Recipe: Make Crispy Kharaboondi at home for evening snacks