ಬೆಂಗಳೂರು :singer ajay warrior : ಮಳೆ ಶುರುವಾಯ್ತು ಅಂದರೆ ಸಾಕು ಬಿಬಿಎಂಪಿಯ ಒಂದೊಂದೆ ಕಳಪೆ ಕಾಮಗಾರಿಗಳು ಬೆಳಕಿಗೆ ಬರುತ್ತದೆ. ಒಂದೆಡೆ ಮರಗಳು ಧರೆಗುರುಳಿದರೆ, ಮತ್ತೊಂದೆಡೆ ರಸ್ತೆಯ ಹೊಂಡ ಜೀವ ಹಿಂಡುತ್ತದೆ. ಇನ್ನೊಂದೆಡೆ ರಾಜಕಾಲುವೆ ಅಲ್ಲಲ್ಲಿ ಓಡಾಡಲೂ ಆಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಬಿಡುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿಯೂ ಈ ಎಲ್ಲಾ ಸಮಸ್ಯೆಗಳು ಮರುಕಳಿಸುತ್ತದೆ. ಆದರೆ ಎಮ್ಮೆ ಚರ್ಮದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಕ್ಯಾರೇ ಎನ್ನೋದಿಲ್ಲ.
ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಪುಟ್ಪಾತ್ನಲ್ಲಿದ್ದ ಡ್ರೈನ್ಹೋಲ್ನಲ್ಲಿ ಬಿದ್ದು ಖ್ಯಾತ ಗಾಯಕ ಅಜಯ್ ವಾರಿಯರ್ ತೀವ್ರ ಪೆಟ್ಟನ್ನು ಅನುಭವಿಸುವಂತಾಗಿದೆ. ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಡ್ರೈನ್ ಹೋಲ್ ಮುಚ್ಚದೇ ಇದ್ದದ್ದು ಕಾಣದ ಹಿನ್ನೆಲೆಯಲ್ಲಿ ಅಜಯ್ ವಾರಿಯರ್ ಅದರೊಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡು ವಿಶ್ರಾಂತಿ ಪಡೆಯುವಂತಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಗಾಯಕ ಬಿಬಿಎಂಪಿ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.
ಮಗಳ ಹುಟ್ಟು ಹಬ್ಬ ಇದ್ದ ಕಾರಣ ಗಾಯಕ ಅಜಯ್ ವಾರಿಯರ್ ಕಳೆದ ಭಾನುವಾರ ಬೆಂಗಳೂರಿನಿಂದ ಕೇರಳಕ್ಕೆ ಹೊರಡುವವರಿದ್ದರು. ರೈಲಿನಲ್ಲಿ ಕೇರಳಕ್ಕೆ ತೆರಳುವವರಿದ್ದ ಅಜಯ್ ವಾರಿಯರ್ಗೆ ಬೆಂಗಳೂರಿನಲ್ಲಿ ಮಳೆ ಬೇರೆ ಎದುರಾಗಿತ್ತು. ಕ್ಯಾಬ್ ಸೌಕರ್ಯ ಕೂಡ ಸೂಕ್ತ ಸಮಯಕ್ಕೆ ಸಿಗದ ಹಿನ್ನೆಲೆಯಲ್ಲಿ ಅಜಯ್ ಕಾಲ್ನಡಿಗೆಯಲ್ಲಿಯೇ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದರು. ಮೆಟ್ರೋ ನಿಲ್ದಾಣದ ಫುಟ್ ಪಾತ್ನಲ್ಲಿದ್ದ ಡ್ರೈನ್ ಹೋಲ್ ತುಂಬಾ ನೀರು ತುಂಬಿದ್ದರಿಂದ ಅಜಯ್ ವಾರಿಯರ್ಗೆ ಅದು ತೆರೆದ ಡ್ರೈನ್ ಹೋಲ್ ಎಂಬುದು ಗಮನಕ್ಕೆ ಬಾರಲಿಲ್ಲ. ಅಲ್ಲೇ ಕಾಲಿಟ್ಟ ಅಜಯ್ ಡ್ರೈನ್ ಹೋಲ್ನ ಒಳಕ್ಕೆ ಬಿದ್ದಿದ್ದಾರೆ. ಅವರ ಎದೆಯವರೆಗೆ ನೀರು ಬರುವಷ್ಟು ಆಳಕ್ಕೆ ಅಜಯ್ ಬಿದ್ದಿದ್ದರು.
ಹೇಗೋ ಅಜಯ್ ವಾರಿಯರ್ ಡ್ರೈನ್ ಹೋಲ್ನಿಂದ ಹೊರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ಕಾಲಿಗೆ ಬಲವಾದ ಏಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಯಲ್ಲಿ ನಾನು ಯಾರನ್ನು ದೂಷಿಸಬೇಕು..? ನನ್ನನ್ನೇ ಅಲ್ಲವೇ..?ನೀರು ತುಂಬಿದ ರಸ್ತೆಯಲ್ಲಿ ಈಜುವ ಬದಲು ಫುಟ್ಪಾತ್ ಮೇಲೆ ಹತ್ತಲು ಹೋದದ್ದು ನನ್ನದೇ ತಪ್ಪು. ನನಗೇ ಹುಚ್ಚು ಎಂದು ವ್ಯಂಗ್ಯವಾಗಿ ಬರೆಯುವ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು
ಇದನ್ನೂ ಓದಿ : supreme court : ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ : 2 ವಾರಗಳಲ್ಲಿ ನೋಟಿಫಿಕೇಶನ್
singer ajay warrior fel to drain hole