ಯುವ ಸಬಲೀಕರಣ, ಕ್ರೀಡಾ ಕ್ಷೇತ್ರದ ಪ್ರಗತಿಗೆ ಸಂಕಲ್ಪ: ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿ

ಬೆಂಗಳೂರು : (Swami Vivekananda YuvaShakti Yojana) ಯುವ ಜನತೆಗೆ ಸ್ವಯಂ ಉದ್ಯೋಗ ನಡೆಸಲು ಪ್ರೋತ್ಸಾಹಿಸುವ ಸಲುವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಘೋಷಿಸಿದ್ದು ಯುವಕರ ಜಂಟಿ ಗುಂಪುಗಳಿಗೆ ಐದು ಲಕ್ಷ ರೂ ವರೆಗೆ ಸಹಾಯಧನ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನಗರ ಪ್ರದೇಶದ ಯುವಜನತೆಗೆ ಕೌಶಲ್ಯ ತರಬೇತಿ ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಸ್ವ ಉದ್ಯೋಗ ಆರಂಭಿಸಲು ಉತ್ತೇಜಿಸುವ ಮಹತ್ವದ ಕ್ರಮ ಕೈಗೊಂಡಿರುವ ಸರಕಾರ, ಗ್ರಾಮೀಣ ಭಾಗದ ಯುವಜನತೆಗೂ ಉತ್ತೇಜನ ನೀಡಲು ಈ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾದ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10 ಸಾವಿರ ರೂ ನಂತೆ ಸುತ್ತುನಿಧಿ, ಹಾಗೆಯೇ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಒಂದು ಲಕ್ಷ ರೂ. ಒಳಗೊಂಡಂತೆ ಬ್ಯಾಂಕ್‌ನ ನೆರವಿನೊಂದಿಗೆ ಐದು ಲಕ್ಷ ರೂ. ವರೆಗೆ ಸಹಾಯಧನ ನೀಡುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಇದೀಗ ಜಾರಿಯಾಗಿದೆ. ಇದರಿಂದ ಯುವಜನತೆಗೆ ಗ್ರಾಮೀಣ ಪ್ರದೇಶದಲ್ಲೇ ಇದ್ದುಕೊಂಡು ಸ್ವ ಉದ್ಯೋಗ ನಡೆಸಿ ಆರ್ಥಿಕ ಸ್ವಾವಲಂಬನೆ ಜೊತೆಗೆ ಪ್ರಗತಿ ಹೊಂದಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಬೊಮ್ಮಾಯಿ ಅವರು ಹೇಳಿದರು.

ಇನ್ನೂ ಆರ್ಥಿಕ ಸಮಸ್ಯೆ, ದುಡಿಯುವ ಅನಿವಾರ್ಯತೆ ಸೇರಿದಂತೆ ಹಲವು ಕಾರಣಗಳಿಂದಾಗಿ ಶಿಕ್ಷಣ ಮುಂದುವರೆಸಲಾಗದೇ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸುವ ಯುವಜನತೆಗೆ ಆರ್ಥಿಕ ನೆರವು ನೀಡಿ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಸಿಎಂ ಬೊಮ್ಮಾಯಿ ಅವರು ಬದುಕುವ ದಾರಿ ಎನ್ನುವ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಶಿಕ್ಷಣ ಮುಂದುವರೆಸಲಾಗದ ಯುವಜನತೆಗೆ ಐಟಿಐಗಳಲ್ಲಿ ಮೂರು ತಿಂಗಳ ಅವಧಿಯ ವೃತ್ತಿಪರ ಸರ್ಟಿಫಿಕೇಟ್‌ ತರಬೇತಿ ಪಡೆಯಲು ಮಾಸಿಕ 1500 ರೂ. ಶಿಷ್ಯವೇತನ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಅಂಪ್ರೆಟಿಶಿಪ್‌ ಕಾರ್ಯಕ್ರಮದಡಿಯಲ್ಲಿ ಮೂರು ತಿಂಗಳ ಅವಧಿಗೆ ಮಾಸಿಕ 1500 ರೂ, ಶಿಶಿಕ್ಷು ಭತ್ಯೆ ನೀಡಿ ಉತ್ತೇಜಿಸಲು ಮುಂದಾಗಿದೆ.

ಇದನ್ನೂ ಓದಿ : ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ

ಪದವಿ ಶಿಕ್ಷಣ ಮುಗಿಸಿ ಮೂರು ವರ್ಷಗಳ ನಂತರವೂ ಕೆಲಸ ಸಿಗದೇ ಆರ್ಥಿಕ ಸಂಕಟದಲ್ಲಿರುವ ಯುವಜನತೆಗೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಸ್ನೇಹಿ ಎನ್ನುವ ಇನ್ನೊಂದು ಹೊಸ ಯೋಜನೆಯನ್ನು ಸಿಎಂ ಬೊಮ್ಮಾಯಿ ಪ್ರಕಟಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಒಂದು ಬಾರಿ ಎರಡು ಸಾವಿರ ರೂ. ಆರ್ಥಿಕ ನೆರವು ನೀಡಿ ಉತ್ತೇಜಿಸಲು ಸರಕಾರ ತೀರ್ಮಾನಿಸಿದೆ. ಇನ್ನೊಂದೆಡೆ ಕ್ರೀಡಾ ಕ್ಷೇತ್ರದ ಬಗ್ಗೆಯೂ ಗಮನ ಹರಿಸಿದ ಬೊಮ್ಮಾಯಿ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣ, ಮಂಡ್ಯ ಹಾಗೂ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತ ಕ್ರೀಡಾ ವಿಜ್ಞಾನ ಕೇಂದ್ರಗಳ ಸ್ಥಾಪಿಸಲು ನಿರ್ಧಿರಿಸಿದ್ದಾರೆ.

Swami Vivekananda YuvaShakti Yojana: Youth empowerment, commitment to progress in sports field: Swami Vivekananda YuvaShakti Yojana launched

Comments are closed.