ನವದೆಹಲಿ : ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಕಳೆದೊಂದು ವರ್ಷದಿಂದ ಏರುಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರವು ಶೇ.7.35ಕ್ಕೆ ಏರಿಕೆಯಾಗುವ ಮೂಲಕ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಶೇ. 5.54ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿ ಸಾಗುತ್ತಿದ್ದು, ಡಿಸೆಂಬರ್ ನಲ್ಲಿ ಆರ್ ಬಿಐ ವ್ಯಾಪ್ತಿ ಮೀರಿ ಶೇ. 7.35ಕ್ಕೆ ಏರಿಕೆಯಾಗಿದೆ. ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು 2018ರ ಡಿಸೆಂಬರ್ನಲ್ಲಿ ಶೇ.2.11ರಷ್ಟಿದ್ದರೆ, 2019ರ ಡಿಸೆಂಬರ್ ನಲ್ಲಿ ಶೇ.7.53ಕ್ಕೆ ಏರಿಕೆಯಾಗಿದೆ.

ಈ ಹಿಂದೆ 2014ರಲ್ಲಿ ಚಿಲ್ಲರೆ ಹಣದುಬ್ಬರ ಶೇ.7.39 ಗರಿಷ್ಠ ಮಟ್ಟ ದಾಖಲಾಗಿತ್ತು. ಇದೀಗ ಮತ್ತೆ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟ ದಾಖಲಾಗಿದ್ದು, ದೇಶದ ಆರ್ಥಿಕತೆ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಅಂಕಿ-ಅಂಶಗಳು ಮತ್ತೆ ಸ್ಪಷ್ಟಪಡಿಸಿವೆ. ಚಿಲ್ಲರೆ ಹಣದುಬ್ಬರವು ಆರ್ಥಿಕತೆ ಅಂಶಗಳಲ್ಲಿ ಪ್ರಮುಖವಾದುದು. ಇದರ ಮೇಲೆ ಆರ್‌ಬಿಐ ಸತತ ನಿಗಾ ಇಟ್ಟಿರುತ್ತದೆ.