ಶ್ರೀನಗರ : ಜಮ್ಮು- ಕಾಶ್ಮೀರದಲ್ಲಿ ಹಿಮಪಾತ ತೀವ್ರಗೊಳ್ಳುತ್ತಿರುವ ಬೆನ್ನಲ್ಲೆ ವಿವಿಧೆಡೆ ಸಂಭವಿಸಿದ ಹಿಮಕುಸಿತದ ಅವಘಡದಲ್ಲಿ 6 ಯೋಧರು ಮತ್ತು ಐವರು ನಾಗರಿಕರು ಸಾವನ್ನಪ್ಪಿದ್ದಾರೆ. ಆರು ಯೋಧರು ಸೇರಿ 12ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಹಿಮಾಚಲಪ್ರದೇಶದಲ್ಲಿನ ಎರಡು ಹಿಮಕುಸಿತ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್ನ ಸೇನಾ ಚೌಕಿ ಬಳಿ ಸೋಮವಾರ ಸಂಭವಿಸಿದ ಹಿಮಕುಸಿತಕ್ಕೆ ಐವರು ಯೋಧರು ಹುತಾತ್ಮರಾಗಿದ್ದಾರೆ. ತಾಪಮಾನ ಮೈನಸ್ 12ಕ್ಕಿಂತ ಕಡಿಮೆ ಇರುವುದು ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ನೌಗಮ್ ಸೆಕ್ಟರ್ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ಹುತಾತ್ಮರಾಗಿದ್ದಾರೆ. ಈ ವೇಳೆ ಹಿಮದಲ್ಲಿ ಸಿಲುಕಿದ್ದ 6 ಸೈನಿಕರನ್ನು ರಕ್ಷಣೆ ಮಾಡಲಾಗಿದೆ. ಗನರ್ದೆಬಲ್ ಜಿಲ್ಲೆಯ ಸೋನಮಾರ್ಗ್ ನಲ್ಲೂ ಸೋಮವಾರ ಹಿಮಕುಸಿತ ಸಂಭವಿಸಿದ್ದು, ಐವರು ನಾಗರಿಕರು ಸಾವನ್ನಪ್ಪಿದ್ದಾರೆ. ಹಿಮದಲ್ಲಿ ಸಿಲುಕಿದ್ದ ಇತರ ನಾಲ್ವರನ್ನು ಭದ್ರತಾ ಪಡೆಗಳು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ. ಗುರೆಜ್ ಮತ್ತು ರಾಂಪುರ್ ಸೆಕ್ಟರ್ನಲ್ಲೂ ಹಿಮಕುಸಿತವಾಗಿದ್ದು, ಸಾವು- ನೋವಿನ ಮಾಹಿತಿ ತಿಳಿದುಬಂದಿಲ್ಲ. ಕಳೆದ 48 ಗಂಟೆಗಳಿಂದ ಭಾರಿ ಹಿಮಪಾತವಾಗುತ್ತಿರುವುದರಿಂದ ಉತ್ತರ ಕಾಶ್ಮೀರದ ಹಲವು ಕಡೆಗಳಲ್ಲಿ ಹಿಮಕುಸಿತ ಸಂಭವಿಸಿದೆ. ಬಾರಾಮೂಲ ಜಿಲ್ಲೆಯಲ್ಲಿ ಹಿಮದಲ್ಲಿ ಸಿಲುಕಿದ್ದ ಇಬ್ಬರು ಯುವತಿಯರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಹಿಮಕುಸಿತ ಪ್ರಕರಣಗಳಲ್ಲಿ ಕನಿಷ್ಠ 57 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಹಲವರು ಕಣ್ಮರೆಯಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ನೀಲಂ ಕಣಿವೆಯಲ್ಲಿ ತೀವ್ರ ಹಿಮಪಾತವಾಗುತ್ತಿದ್ದು, ಹಲವೆಡೆ ಹಿಮಕುಸಿತ ಹಾಗೂ ಭೂಕುಸಿತ ಸಂಭವಿಸಿದೆ. ಈ ಪ್ರದೇಶದ ಸುಮಾರು 57 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. 2012ರಲ್ಲಿ ಪಾಕಿಸ್ತಾನದ ಸೇನಾ ಬೆಟಾಲಿಯನ್ ಮುಖ್ಯಕಚೇರಿ ಬಳಿ ಸಂಭವಿಸಿದ್ದ ಭಾರಿ ಹಿಮಕುಸಿತದಲ್ಲಿ 124 ಸೈನಿಕರು ಹಾಗೂ 11 ನಾಗರಿಕರು ಸಾವನ್ನಪ್ಪಿದ್ದರು.

ಜಮ್ಮು- ಕಾಶ್ಮೀರದಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಸಂಭವಿಸುವ ಹಿಮಕುಸಿತದಲ್ಲಿ ಯೋಧರು ಹುತಾತ್ಮರಾಗುವುದು ಹಾಗೂ ಗಾಯಗೊಳ್ಳುವ ಅನೇಕ ಪ್ರಕರಣಗಳು ನಡೆಯುತ್ತವೆ. ಕಳೆದ ವರ್ಷ ನವೆಂಬರ್ನಲ್ಲಿ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ 8 ಯೋಧರು ಹುತಾತ್ಮರಾಗಿದ್ದರು. 2016ರ ಫೆಬ್ರವರಿಯಲ್ಲಿ ಕರ್ನಾಟಕದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಸೇರಿ ಹತ್ತು ಯೋಧರು ಸಿಯಾಚಿನ್ನಲ್ಲಿ ಹಿಮಕುಸಿತಕ್ಕೆ ಸಿಲುಕಿ 35 ಅಡಿ ಆಳದಲ್ಲಿ ಹೂತುಹೋಗಿದ್ದರು. ಬಳಿಕ 150 ಯೋಧರ ರಕ್ಷಣಾ ತಂಡ ಸತತ ಕಾರ್ಯಾಚರಣೆ ನಡೆಸಿ 6 ದಿನಗಳ ಕಾಲ ಹಿಮದಲ್ಲಿ ಹೂತುಹೋಗಿದ್ದರು ಹನುಮಂತಪ್ಪರನ್ನು ಜೀವಂತವಾಗಿ ರಕ್ಷಿಸಲಾಗಿತ್ತು. ಮಿಕ್ಕ ಎಲ್ಲ ಯೋಧರು ಹುತಾತ್ಮರಾಗಿದ್ದರು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಹನುಮಂತಪ್ಪ ಕೊಪ್ಪದ ದೆಹಲಿಯ ಸೇನಾ ಆಸ್ಪತ್ರೆಯಲಿ ಅಸುನೀಗಿದರು. ಹಿಮಾಚಲಪ್ರದೇಶದ ಪೂಹ್ನ ತಿಂಕುನಲ್ಲಾಹ್ದಲ್ಲಿ ಸಂಭವಿಸಿದ ಹಿಮಕುಸಿತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದೆ. ರಸ್ತೆಯಲ್ಲಿ ಭಾರಿ ಪ್ರಮಾಣದ ಹಿಮಕುಸಿತ ಸಂಭವಿಸಿದ್ದು, ಪ್ರವಾಸಿಗರು ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಇದೆ. ಹಿಮದ ರಾಶಿ ಪ್ರವಾಹದಂತೆ ನುಗ್ಗಿ ಬರುತ್ತಿದ್ದಾಗ ಓಡುತ್ತಿದ್ದ ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಅದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.