ಕೇವಲ 20 ರೂಪಾಯಿ ಇಡ್ಲಿ ವಿಚಾರಕ್ಕೆ ವ್ಯಾಪಾರಿಯ ಹತ್ಯೆ..!

ಮುಂಬೈ : ಆಸ್ತಿಗಾಗಿ, ಸಂಪತ್ತಿಗಾಗಿ ಕೊಲೆ ನಡೆಯುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ಕೇವಲ 20 ರೂಪಾಯಿ ಇಡ್ಲಿ ವಿಚಾರಕ್ಕೆ ವ್ಯಾಪಾರಿಯೋರ್ವನನ್ನು ಮೂವರು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಮುಂಬೈನ ಥಾಣೆಯಲ್ಲಿರುವ ಮೀರಾರೋಡ್ ನಲ್ಲಿ ನಡೆದಿದೆ.

ವೀರೇಂದ್ರ ಯಾದವ್ ( 26 ವರ್ಷ) ಎಂಬಾತನೇ ಕೊಲೆಯಾದ ದುರ್ದೈವಿ. ವೀರೇಂದ್ರ ಯಾದವ್ ಮೀರಾರೋಡ್ ನಲ್ಲಿ ಕಳೆದ ಕೆಲ ವರ್ಷಗಳಿಂದಲೂ ಇಡ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮೊನ್ನೆಯೂ ಇಡ್ಲಿ ತಿನ್ನುವುದಕ್ಕೆ ಅಂತಾ ಮೂವರು ವ್ಯಕ್ತಿಗಳು ಕಾರಿನಲ್ಲಿ ಬಂದಿದ್ದಾರೆ.

ಹೀಗೆ ಬಂದವರು ಇಡ್ಲಿ ತಿಂದ ಬಳಿಕ ನೀನು 20 ರೂಪಾಯಿ ಬಾಕಿ ಕೊಡಬೇಕು ತಗಾದೆ ತೆಗೆದಿದ್ದಾರೆ. ಈ ವೇಳೆಯಲ್ಲಿ ವ್ಯಾಪಾರಿ ತಾನು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದ್ರೂ ಆ ಮೂವರು ದುಷ್ಕರ್ಮಿಗಳು ಕೇಳಲೇ ಇಲ್ಲ. ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ, ಮೂವರು ಸೇರಿಕೊಂಡು ವೀರೇಂದ್ರ ಯಾದವ್ ನನ್ನು ಪಕ್ಕಕ್ಕೆ ದೂಡಿದ್ದಾರೆ. ಇದರಿಂದಾಗಿ ವೀರೇಂದ್ರ ಯಾದವ್ ತಲೆಗೆ ಗೋಡೆಗೆ ಬಡಿದು ಸಾವನ್ನಪ್ಪಿದ್ದಾನೆ.

ಇಡ್ಲಿ ವ್ಯಾಪಾರಿ ಸಾವನ್ನಪ್ಪುತ್ತಿದ್ದಂತೆಯೇ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಮೀರಾರೋಡ್ ಪೊಲೀಸ್ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.