ನವದೆಹಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್‌ಕೌಂಟರ್ ನಡೆಸಿದ್ದು, ಪಾಕಿಸ್ತಾನ ಎಲ್ಇಟಿ ಕಮಾಂಡರ್ ಸೇರಿ 3 ಉಗ್ರರ ಹೊಡೆದುರುಳಿಸಿದೆ.
ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರು ಪುಲ್ವಾಮಾ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದಾರೆ ಅನ್ನೋ ಮಾಹಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಭಾರತೀಯ ಸೈನಿಕರು ಖಚಿತ ಮಾಹಿತಿಯ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆಯನ್ನು ಎನ್ಕೌಂಟರ್ ಆಗಿ ಪರಿವರ್ತಿಸಿದ ಸೇನಾಪಡೆ, ಸ್ಥಳವನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದೆ.
ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಐಜಾನ್ ಅಲಿಯಾಸ್ ಅಬು ಹುರೈರಾ ಸೇರಿ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಅಲ್ಲದೇ ಪುಲ್ವಾಮಾದಲ್ಲಿ ಕಾರ್ಯಾಚರಣೆಯನ್ನು ಮುಂದುರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವ ಕುರಿತು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ಇನ್ನೊಂದೆಡೆ ಪಾಕಿಸ್ತಾನದ ಹದಿನೈದು ಸೈನಿಕರನ್ನು ತಾಲಿಬಾನ್ ಉಗ್ರರು ಅಪಹರಿಸಿ ಹತ್ಯೆ ಮಾಡಲಾಗಿದೆ. ಅಪಹರಣಕ್ಕೆ ಒಳಗಾದ ಸೈನಿಕರಲ್ಲಿ ಹಿರಿಯ ಅಧಿಕಾರಿಗಳು ಕೂಡ ಇದ್ದರು ಎನ್ನಲಾಗುತ್ತಿದೆ.