ಜಮ್ಮು & ಕಾಶ್ಮೀರ : Another jolt to Congress: ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಆಘಾತವನ್ನು ಕಾಂಗ್ರೆಸ್ ಅರಗಿಸಿಕೊಳ್ಳುವುದರ ಒಳಗೆಯೇ ಕಾಂಗ್ರೆಸ್ಗೆ ಇಂದು ಮತ್ತಷ್ಟು ಶಾಕ್ ಎದುರಾಗಿದೆ. ಗುಲಾಂ ನಂಬಿ ಆಜಾದ್ಗೆ ಬೆಂಬಲವನ್ನು ಸೂಚಿಸಿ ಜಮ್ಮು & ಕಾಶ್ಮೀರದ ಐವರು ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಶಾಸಕರು ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಪಕ್ಷದ ಕಾರ್ಯವಿಧಾನವನ್ನು ಸಂಪೂರ್ಣ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ನಾಯಕರಾದ ಗುಲಾಂ ಮೊಹಮ್ಮದ್ ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮಿನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಚೌಧರಿ ಅಕ್ರಂ ಮೊಹಮ್ಮದ್ ಹಾಗೂ ಸಲ್ಮಾನ್ ನಿಜಾಮಿ ಅವರು ಗುಲಾಂ ನಬಿ ಆಜಾದ್ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ .
ಇಂದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತಕಾರಿ ಸುದ್ದಿ ಎಂಬಂತೆ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆಯನ್ನು ನೀಡಿದ್ದಾರೆ. ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದ ಗುಲಾಂ ನಬಿ ಆಜಾದ್ ತಮ್ಮ ರಾಜೀನಾಮೆಗೆ ರಾಹುಲ್ ಗಾಂಧಿ ನಡೆಯೇ ಕಾರಣ ಎಂದು ದೂರಿದ್ದರು.
ರಾಜೀನಾಮೆ ಪತ್ರದಲ್ಲಿ ನೇರವಾಗಿ ರಾಹುಲ್ ಗಾಂಧಿಯ ಹೆಸರನ್ನೇ ಉಲ್ಲೇಖಿಸಿರುವ ಗುಲಾಂ ನಬಿ ಆಜಾದ್ ರಾಹುಲ್ ಗಾಂಧಿಯ ರಿಮೋಟ್ ಕಂಟ್ರೋಲ್ ಮಾಡೆಲ್ ರೀತಿಯ ನಾಯಕತ್ವವು ಕಾಂಗ್ರೆಸ್ನ ಸಾಂಸ್ಥಿಕ ಸಮಗ್ರತೆಯನ್ನು ಕೆಡವಿದೆ ಹಾಗೂ ಪಕ್ಷದ ನಿರ್ಧಾರಗಳನ್ನು ರಾಹುಲ್ ಗಾಂಧಿ ಅಥವಾ ಅವರ ಭದ್ರತಾ ಸಿಬ್ಬಂದಿ ಹಾಗೂ ಪಿಎಗಳು ತೆಗೆದುಕೊಳ್ತಿದ್ದಾರೆ ಎಂದು ಆರೋಪಿಸಿದ್ದಾರೆ .
ರಾಹುಲ್ ಗಾಂಧಿ ಪಕ್ಷದ ಎಲ್ಲಾ ಹಿರಿಯ ಹಾಗೂ ಅನುಭವಿ ನಾಯಕರನ್ನು ಬದಿಗೆ ಸರಿಸಿದ್ದಾರೆ. ಯಾವುದೇ ಅನುಭವವೇ ಇಲ್ಲದ ನಾಯಕರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಯುಪಿಎ ಅಧಿಕಾರದ ಅವಧಿಯಲ್ಲಿ ಮಾಧ್ಯಮಗಳ ಎದುರಲ್ಲೇ ಸರ್ಕಾರಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದರು. ಇದೇ ಅವರ ಅಪ್ರಬುದ್ಧತೆಯ ಜ್ವಲಂತ ಉದಾಹರಣೆ ಎಂದು ಕುಟುಕಿದ್ದಾರೆ.
ರಾಹುಲ್ ಗಾಂಧಿಯ ಇಂತಹ ಬಾಲಿಶ ನಡವಳಿಕೆಗಳು ದೇಶದಲ್ಲಿ ಪ್ರಧಾನ ಮಂತ್ರಿ ಹಾಗೂ ಭಾರತ ಸರ್ಕಾರದ ಅಧಿಕಾರವನ್ನು ಸಂಪೂರ್ಣ ಬುಡಮೇಲು ಮಾಡಿತ್ತು. ರಾಹುಲ್ ಗಾಂಧಿಯ ಈ ಒಂದು ನಡೆ 2014ರಲ್ಲಿ ಯುಪಿಎ ಸರ್ಕಾರ ಸೋಲಲು ಮುಖ್ಯ ಕಾರಣವಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ : BIG BREAKING : ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ
Another jolt to Congress: 5 J&K leaders quit after Ghulam Nabi Azad’s resignation