ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ದಿನ ಕಳೆದಂತೆ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಈ ನಡುವಲ್ಲೇ ಚಿಕಿತ್ಸೆಗಾಗಿ ತುರ್ತು ನಿಗಾ ಘಟಕಗಳ ಕೊರತೆ ಎದುರಾಗುವುದು ಸಿಲಿಕಾನ್ ಸಿಟಿ ಮಂದಿಗೆ ಆತಂಕ ಮೂಡಿಸಿದೆ.

ಕಳೆದೊಂದು ವಾರದಿಂದಲೂ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಒಂದೆಡೆ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ 55 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ರೆ, ಇದುವರೆಗೆ ಒಟ್ಟು 827 ಮಂದಿಗೆ ಕೊರೊನಾ ಸೋಂಕು ಆವರಿಸಿದೆ. ಇದುವರೆಗೆ ಒಟ್ಟು 370 ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆದರೆ 413 ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಪೈಕಿ ಕೆಲವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ ದಾಖಲೆಯ ಪ್ರಮಾಣದಲ್ಲಿ ಬಲಿ ಪಡೆಯುತ್ತಿದೆ. ಕಳೆದೊಂದು ವಾರದಿಂದಲೂ ಸುಮಾರು 15ಕ್ಕೂ ಅಧಿಕ ಮಂದಿ ಕೊರೊನಾ ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಅಲ್ಲದೇ ಸಿಲಿಕಾನ್ ಸಿಟಿಯಲ್ಲಿ ನಿತ್ಯವೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಜನರಿಗೆ ಆತಂಕವನ್ನು ತಂದೊಡ್ಡಿದೆ. ಈ ನಡುವಲ್ಲೇ ಸಿಲಿಕಾನ್ ಸಿಟಿಯಲ್ಲೀಗ ತುರ್ತು ನಿಗಾ ಘಟಕಗಳ ಕೊರತೆ ಎದುರಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಜೊತೆಗೆ ನೇರ ಸಂಪರ್ಕವನ್ನು ಹೊಂದಿದ 869 ಮಂದಿ ಹಾಗೂ ಸೆಕಂಡರಿ ಸಂಪರ್ಕ ಹೊಂದಿದ 1,257 ಮಂದಿ ಸೇರಿದಂತೆ ಒಟ್ಟು 2,126 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಕ್ವಾರಂಟೈನ್ ನಲ್ಲಿರುವವರ ಗಂಟಲು ದ್ರವದ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ನಗರದಲ್ಲಿ ಸೋಂಕಿತರು ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ನಗರದಲ್ಲಿ ಒಟ್ಟು 35 ಮಂದಿಯನ್ನ ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ವೃದ್ದರಿಗೆ ಸೋಂಕು ತುತ್ತಾಗಿ ಗಂಭೀರ ಪರಿಸ್ಥಿತಿ ಎದುರಾದ್ರೆ ತುರ್ತು ನಿಗಾ ಘಟಕಗಳ ಅಭಾವ ಎದುರಾಗುವ ಆತಂಕವಿದೆ.

ಸಿಲಿಕಾನ್ ಸಿಟಿಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸೋಂಕಿತ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿ ಗಂಭೀರ ಸ್ಥಿತಿಗೆ ತಲುಪಿದ್ರೆ ಅಪಾಯ ಕಟ್ಟಿಟ್ಟಬುತ್ತಿ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯ ಮಂದಿ ಕೊರೊನಾ ನಿಯಂತ್ರಣಕ್ಕೆ ಸ್ವಯಂ ಮುನ್ನೆಚ್ಚರಿಕೆ ವಹಿಸಲೇಬೇಕಾಗಿದೆ.