ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವಲ್ಲೇ ಹಕ್ಕಿಜ್ವರದ ಭೀತಿ ಎದುರಾಗಿದೆ. ದೆಹಲಿಯ ಏಮ್ಸ್‌ನಲ್ಲಿ ಹಕ್ಕಿಜ್ಬರ 12 ವರ್ಷದ ಬಾಲಕನನ್ನು ಬಲಿ ಪಡೆದಿದೆ. ಅಲ್ಲದೇ ಬಾಲಕ ಸಂಪರ್ಕದಲ್ಲಿ ಇದ್ದವರನ್ನು ಐಸೋಲೇಷನ್‌ಗೆ ಒಳಪಡಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಏಮ್ಸ್ ( ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ನ ಮಕ್ಕಳ ವಿಭಾಗದಲ್ಲಿ ಬಾಲಕನೋರ್ವ ದಾಖಲಾಗಿದ್ದ. ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೊನಿಯಾ ಇತ್ತು. ಆದರೆ ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ಬಾಲಕನನ್ನು ಐಸಿಯುಗೆ ದಾಖಲಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಆದ್ರೆ ಬಾಲಕ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಮೂಲಕ ಎಚ್5ಎನ್1ಗೆ ಬಲಿಯಾದ ಮೊದಲ ಪ್ರಕರಣವಾಗಿದೆ.

12 ವರ್ಷದ ಬಾಲಕ ಸಾವನ್ನಪ್ಪಿದ್ದ ಬೆನ್ನಲ್ಲೇ ದೇಶದಲ್ಲಿ ಹಕ್ಕಿಜ್ವರದ ಭೀತಿ ಶುರುವಾಗಿದೆ. ಮೃತ ಬಾಲಕನ ಸಂಪರ್ಕಕ್ಕೆ ಬಂದಿದ್ದ ಏಮ್ಸ್ ಆಸ್ಪತ್ರೆಯ ವೈದ್ಯರು, ದಾದಿಯರು ಕೂಡ ಐಸೋಲೇಷನ್‌ಗೆ ಒಳಗಾಗಿದ್ದಾರೆ. ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆಸಾಮಾನ್ಯವಾಗಿ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್ ಹಕ್ಕಿಗಳ ಮೂಲಕ ಮನುಷ್ಯರಿಗೂ ಹರಡುತ್ತಿದೆ. ಮನುಷ್ಯರಲ್ಲಿ ಈ ವೈರಸ್ ಕಾಣಿಸಿಕೊಂಡರೆ ಬಹು ಬೇಗನೆ ಇತರರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ 60ರಷ್ಟು ಸಾವನ್ನು ತರುತ್ತದೆ ಎಂದು ವಿಶ್ವ ಆರೋಗ್ಯಸಂಸ್ಥೆ ತಿಳಿಸಿದೆ.

ಕೇಂದ್ರ ಸರಕಾರ ಈ ಹಿಂದೆಯೇ ಹಕ್ಕಿಜ್ವರದ ಕುರಿತು ಎಚ್ಚರಿಕೆಯನ್ನು ನೀಡಿತ್ತು. ಅಲ್ಲದೇ ಕೇರಳ, ದೆಹಲಿ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಹರ್ಯಾಣಗಳಲ್ಲಿ ಹಕ್ಕಿಜ್ವರದಿಂದ ಸಾಕಷ್ಟು ಪಕ್ಷಿಗಳು ಸಾವನ್ನಪ್ಪಿದ್ದವು. ಆದ್ರೀಗ ಹಕ್ಕಿಜ್ವರ ಮನುಷ್ಯನಲ್ಲಿ ಕಾಣಿಸಿಕೊಂಡು ಬಲಿ ಪಡೆದಿದೆ.

ಹಕ್ಕಿಜ್ವರಕ್ಕೆ ಕಾರಣವಾಗಿರೋದು ಎಚ್5ಎನ್1 ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು. 2005-06 ರಲ್ಲಿ ಈ ಎಚ್5ಎನ್1 ವೈರಸ್ ಏಶಿಯಾ, ಯೂರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಸುಮಾರು 400ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡು ಲಕ್ಷಾಂತರ ಜನರನ್ನು ರೋಗಗ್ರಸ್ಥನ್ನಾಗಿ ಮಾಡಿತ್ತು. 1997ರಲ್ಲಿ ಹಾಂಕಾಂಗ್‌ನಲ್ಲಿ ಹಕ್ಕಿಜ್ವರ ಮನುಷ್ಯನಲ್ಲಿ ವರದಿಯಾಗಿದೆ. ಆಗ ಅಲ್ಲಿ 18 ಜನರಿಗೆ ಜನರಿಗೆ ವೈರಸ್ ತಗುಲಿದ್ದು ಆರು ಮಂದಿ ಸಾವನ್ನಪ್ಪಿದ್ದರು. 2008ರಿಂದ ಇದುವರೆಗೆ 48 ದೇಶಗಳಲ್ಲಿ 372 ಜನರಿಗೆ ಹಕ್ಕಿ ಜ್ವರ ತಗುಲಿದೆ. ಅವರಲ್ಲಿ 235 ಮಂದಿ ಸಾವಿಗೀಡಾಗಿದ್ದಾರೆ.

ಪ್ರಮುಖವಾಗಿ ಹಕ್ಕಿಗಳಿಂದ ಹರಡುವ ಈ ವೈರಸ್ ಮನುಷ್ಯನಿಗೆ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು ಉಸಿರಿನಿಂದ ಹರಡುವ ಸಾಧ್ಯತೆಯಿದೆ. ಈ ವೈರಸ್‌ಗೆ ತುತ್ತಾಗಿರುವ ಹಕ್ಕಿ ಸಂಪೂರ್ಣವಾಗಿ ರೋಗಾಣುವಿನಿಂದ ತುಂಬಿರುತ್ತದೆ. ಅಲ್ಲದೇ ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ ಎಲ್ಲವೂ ವೈರಸ್‌ಮಯವಾಗಿರುತ್ತವೆ. ಮನುಷ್ಯ ವೈರಸ್‌ಗೆ ಒಳಗಾಗಿರುವ ಹಕ್ಕಿಯ ಸಂಪರ್ಕಕ್ಕೆ ಬಂದಾಗ ಮನುಷ್ಯನಿಗೆ ಹರಡುವ ಸಾಧ್ಯತೆ ಹೆಚ್ಚು.