ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದೀಗ ಬಿಎಂಟಿಸಿ ಬಸ್ ಚಾಲಕನಿಗೂ ಕೊರೊನಾ ಸೋಂಕು ಇರುವುದು ಧೃಡವಾಗಿದೆ. ಈ ಹಿನ್ನೆಲೆಯಲ್ಲೀಗ ಇತರ ಸಿಬ್ಬಂಧಿಗಳಿಗೆ ಆತಂಕ ಶುರುವಾಗಿದೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಬೆನ್ನಲ್ಲೇ ಕೆಎಸ್ಆರ್ ಸಿಟಿ ಹಾಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಆರಂಭಿಸಿವೆ. ಹೊಸಕೋಟೆ ಡಿಪೋಗೆ ಸೇರಿದ ಚಾಲಕ ಕಳೆದ ಮೂರು ದಿನಗಳಿಂದಲೂ ರಜೆಯಲ್ಲಿದ್ದ. ಈ ವೇಳೆಯಲ್ಲಿ ಸ್ವಯಂಪ್ರೇರಿತವಾಗಿ ಚಾಲಕ ತಪಾಸಣೆಗೆ ಒಳಪಡುತ್ತಲೇ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಪ್ರತಿನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಚಾಲಕನಿಗೆ ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಕೊರೊನಾ ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಬಿಎಂಟಿಸಿ ಸಿಬ್ಬಂಧಿಗಳಿಗೆ ಆತಂಕವನ್ನು ಮೂಡಿಸಿದೆ. ಮಾತ್ರವಲ್ಲ ಚಾಲಕನ ಜೊತೆ ಸಂಪರ್ಕ ಹೊಂದಿದ್ದ ಸಿಬ್ಬಂಧಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಆರೋಗ್ಯಾಧಿಕಾರಿಗಳು ಮಾಡುತ್ತಿದ್ದಾರೆ.

ಚಾಲಕನಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಚಾಲಕನ ಟ್ರಾವೆಲ್ ಹಿಸ್ಟರಿ ಕಲೆಹಾಕಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಚಾಲಕನಿದ್ದ ಬಸ್ಸಿನಲ್ಲಿ ಸಂಚರಿಸಿದ್ದ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸುವ ಅನಿರ್ವಾಯತೆ ಇದೀಗ ಬಂದೊದಗಿದೆ.