ಬೆಳಗಾವಿ : ನಮ್ಮ ಮಗಳು ಇದೀಗ ಒತ್ತಡದಲ್ಲಿದ್ದಾಳೆ. ಈ ಸಂದರ್ಭದಲ್ಲಿ ಅವಳ ಹೇಳಿಕೆಯನ್ನು ಪರಿಗಣಿಸಬಾರದು. ಮಗಳಿಗೆ ಕೌನ್ಸಿಲಿಂಗ್ ಅಗತ್ಯವಿದೆ. ಕೌನ್ಸಿಲಿಂಗ್ ನಂತರವೇ ಆಕೆಯ ಹೇಳಿಕೆಯನ್ನು ಪೊಲೀಸರು ಮತ್ತು ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕು ಎಂದು ಯುವತಿಯ ತಂದೆ ಮನವಿ ಮಾಡಿಕೊಂಡಿದ್ದಾರೆ.

ರಾಸಲೀಲೆ ಸಿಡಿ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾಗುತ್ತಿರೋ ಬೆನ್ನಲ್ಲೇ ಯುವತಿಯ ಪೋಷಕರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಮ್ಮ ಮಗಳನ್ನ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಳಿಯಲ್ಲಿರಲು ಇಷ್ಟವಿದ್ರೆ ನಾವು ನಿನ್ನನ್ನು ಕರೆದುಕೊಳ್ಳುತ್ತೇವೆ. ಏನೇ ಆದ್ರೂ ಆಕೆ ನನ್ನ ಮಗಳು. ಆಕೆಯಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಕೊಡಿಸಲಾಗುತ್ತಿದೆ. ಈ ಪ್ರಕರಣದಿಂದ ನಮ್ಮ ಮನಸ್ಸಿಗೂ ನೋವಾಗಿದೆ. ನಮಗೆ ಕಾನೂನು ಗೊತ್ತಿಲ್ಲ. ಆದ್ರೆ ದೇಶದ ಪ್ರಜೆಯಾಗಿ, ಮಗಳಿಗೆ ತೊಂದರೆ ಆಗಿದ್ದಕ್ಕೆ ದೂರು ಸಲ್ಲಿಸುವ ಹಕ್ಕು ನನಗಿದೆ. ನಾವು ಯಾವುದೇ ಒತ್ತಡದಲ್ಲಿಲ್ಲ ಎಂದಿದ್ದಾರೆ.
ಇನ್ನು ಸಂತ್ರಸ್ತ ಯುವತಿಯ ಪೋಷಕರು ಡಿ.ಕೆ.ಶಿವಕುಮಾರ್ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನ ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ನನ್ನ ಸಹೋದರಿಯೇ ಡಿ.ಕೆ.ಶಿವಕುಮಾರ್ ನೀಡಿದ ಹಣದಿಂದಲೇ ಸಹೋದರಿ ಗೋವಾಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾಳೆ. ನನ್ನ ಬಳಿ ಆಕೆ ಮಾತನಾಡಿರುವ ಆಡಿಯೋ ಕ್ಲಿಪ್ ಇದೆ ಎಂದು ಆರೋಪಿಸಿದ್ದಾರೆ.