Coal Crisis Explained: ಕಲ್ಲಿದ್ದಲು ಕೊರತೆ ಎದುರಾಗಿದ್ದು ಏಕೆ? ವಿದ್ಯುತ್​ ಉತ್ಪಾದನೆ ಮೇಲೆ ಏನೆಲ್ಲಾ ಪರಿಣಾಮ? ಆರ್ಥಿಕ ಪರಿಸ್ಥಿತಿ ಏನಾದೀತು?

ಭಾರತದಲ್ಲಿ ಪ್ರತಿ ಮುಂಗಾರು ಋತುಮಾನದಲ್ಲಿಯೂ ಕಲ್ಲಿದ್ದಲು ಗಣಿಗಳಿಗೆ ನೀರು ನುಗ್ಗಿ ಉತ್ಪಾದನೆ ಕುಸಿಯುವುದು ವಾಡಿಕೆ. ಆದರೆ ಈ ಬಾರಿ ಮಾತ್ರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಕಲ್ಲಿದ್ದಲು ಸಾಗಣೆಯ ರೈಲು ಸಂಚಾರಕ್ಕೂ ಸಮಸ್ಯೆಯಾಗಿದೆ. ಗಣಿಗಳಲ್ಲಿ ರಾಶಿ ಮಾಡಿರುವ ಕಲ್ಲಿದ್ದಲು ತೋಯ್ದು ಹೋಗಿರುವುದರಿಂದ ಅವುಗಳನ್ನು ತಕ್ಷಣಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಒಟ್ಟು ಬೇಡಿಕೆಯ ಪೈಕಿ 60 ಸಾವಿರದಿಂದ 80 ಸಾವಿರ ಟನ್​ ಕಲ್ಲಿದ್ದಲು ಪೂರೈಕೆ ಕೊರತೆ ಆಗಿದೆ. ಹಲವು ವಿದ್ಯುತ್ ಸ್ಥಾವರಗಳಲ್ಲಿ ಕಾಪು ದಾಸ್ತಾನು ಇದ್ದರೂ, ಮುಂದಿನ ದಿನಗಳಲ್ಲಿ ಪೂರೈಕೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಸ್ಥಾವರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಉರಿಸುತ್ತಿಲ್ಲ. ವಿದ್ಯುತ್​ ಉತ್ಪಾದನೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇರುವ 65ಕ್ಕೂ ಹೆಚ್ಚು ಶಾಖೋತ್ಪನ್ನ ಸ್ಥಾವರಗಳಲ್ಲಿ ಎರಡು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು ಹಲವು ರಾಜ್ಯಗಳು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿವೆ.

ಕೇಂದ್ರ ವಿದ್ಯುತ್ ಖಾತೆ ಸಚಿವ ಆರ್‌.ಕೆ.ಸಿಂಗ್ ಈ ಸಂಬಂಧ ವಿವಿಧ ರಾಜ್ಯಗಳ ಇಂಧನ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿ ಚರ್ಚಿಸಿದ್ದಾರೆ. ಅನಗತ್ಯವಾಗಿ ಆತಂಕಗೊಳ್ಳುವುದು ಬೇಡ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಎಲ್ಲ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ವಿವಿಧ ರಾಜ್ಯಗಳಿಂದ ಮನವಿ
ಕಲ್ಲಿದ್ದಲು ಕೊರತೆ ವಿಚಾರದಲ್ಲಿ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಗುಜರಾತ್​, ಪಂಜಾಬ್​, ರಾಜಸ್ಥಾನ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳು ಸಹ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್​ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವಿದ್ಯುತ್​ ಸ್ಥಾವರಗಳಿಗೆ ನೈಸರ್ಗಿನ ಅನಿಲ ಪೂರೈಸಲಾಗುವುದು ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವ ಕಾರಣ ರಾಜಸ್ಥಾನ ಈಗಾಗಲೇ ಒಂದು ಗಂಟೆ ಲೋಡ್‌ ಶೆಡಿಂಗ್ ಶುರು ಮಾಡಿದ್ದರೆ, ಪಂಜಾಬ್​, ಉತ್ತರ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್​ ಕಡಿತ ಆರಂಭವಾಗಿದೆ.

ಸಮಸ್ಯೆಗೆ ಮಳೆಯೇ ಕಾರಣ: ಸಚಿವ ಪ್ರಲ್ಹಾದ್ ಜೋಶಿ
ಕಲ್ಲಿದ್ದಲು ಕೊರತೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್​ಗಢ, ಮಧ್ಯಪ್ರದೇಶ, ಜಾರ್ಖಂಡ್​, ಬಿಹಾರ, ಒಡಿಶಾಗಳಲ್ಲಿ ವಿಪರೀತ ಮಳೆಯಿಂದಾಗಿ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ನಡೆಯುತ್ತಿಲ್ಲ. ಮಳೆಯಲ್ಲಿ ನೆಂದಿರುವ ಕಲ್ಲಿದ್ದಲನ್ನು ಸಾಗಿಸಲೂ ಆಗುತ್ತಿಲ್ಲ. ಪರಿಸ್ಥಿತಿಯನ್ನು ವಿವಿಧ ಸಚಿವಾಲಯಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತತ್‌ಕ್ಷಣಕ್ಕೆ ಅಗತ್ಯವಿರುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ವಾರಕ್ಕೆ ಎರಡು ಬಾರಿ ಕಲ್ಲಿದ್ದಲು ಲಭ್ಯತೆ ಮತ್ತು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ದೇಶೀಯ ಕಲ್ಲಿದ್ದಲು ಪೂರೈಕೆ ಹೆಚ್ಚಿದ್ದು ದೇಶದ ಕಲ್ಲಿದ್ದಲು ಆಮದು ಗಣನೀಯವಾಗಿ ಕಡಿಮೆ ಆಗಿರುವದು ಹೆಮ್ಮೆಯ ವಿಷಯ. ಆತ್ಮನಿರ್ಭರ ಭಾರತದ ನಿರ್ಮಾಣದ ಹಾದಿಯಲ್ಲಿ ದೇಶೀಯ ಕಲ್ಲಿದ್ದಲಿನಿಂದ ವಿದ್ಯುಚ್ಛಕ್ತಿ ಪೂರೈಕೆಗೆ ಹೊಸ ವೇಗ ನೀಡಲಾಗುತ್ತಿದೆ. ಈ ಹಣಕಾಸಿನ ಅರ್ಧವರ್ಷದ ಅವಧಿಯಲ್ಲಿ ದೇಶೀಯ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಶೇ 24ರಷ್ಟು ಹೆಚ್ಚಿದ್ದು, ಆಮದು ಶೇ 30ರಷ್ಟು ಕಡಿಮೆಯಾಗಿದೆ.ಕೋಲ್ ಇಂಡಿಯಾ ಸೇರಿದಂತೆ ಹಲವು ಕಲ್ಲಿದ್ದಲು ಉತ್ಪಾದನಾ ಘಟಕಗಳು ವಿದ್ಯುಚ್ಛಕ್ತಿಗೆ ಬೇಕಾಗುವಷ್ಟು ಕಲ್ಲಿದ್ದಲಿನ ಪೂರೈಕೆ ಮಾಡುತ್ತಿವೆ. ಕಲ್ಲಿದ್ದಲಿನ ಪೂರೈಕೆ ಅತ್ಯಂತ ಗರಿಷ್ಟ ಪ್ರಮಾಣದಲ್ಲಿದ್ದು ವಿದ್ಯುತ ಉತ್ಪಾದನಾ ಕೇಂದ್ರಗಳಲ್ಲಿನ ಕಲ್ಲಿದ್ದಲಿನ ಸಂಗ್ರಹ ಬರುವ ದಿನಗಳಲ್ಲಿ ಹೆಚ್ಚಲಿದೆ ಎಂದು ಜೋಶಿ ಹೇಳಿದ್ದಾರೆ.

ವಿಶ್ವ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ
ಕಲ್ಲಿದ್ದಲು ದರ ವಿಶ್ವದ ವಿವಿಧ ದೇಶಗಳಲ್ಲಿಯೂ ಏರಿಕೆಯಾಗಿದೆ. ಕಳೆದ ಮಾರ್ಚ್​ನಲ್ಲಿ ಟನ್​ಗೆ 60 ಡಾಲರ್​ (4,507 ರೂಪಾಯಿ) ಇದ್ದ ಬೆಲೆಯು ಸೆಪ್ಟೆಂಬರ್ ತಿಂಗಳಲ್ಲಿ 200 ಡಾಲರ್​ಗೆ (15 ಸಾವಿರ ರೂಪಾಯಿ) ಏರಿಕೆಯಾಗಿದೆ. ಹೀಗಾಗಿ ಕಲ್ಲಿದ್ದಲು ಆಮದು ನಷ್ಟದ ಬಾಬ್ತು ಎನಿಸಿಕೊಂಡಿದೆ. ಚೀನಾದಲ್ಲಿ ತಲೆದೋರಿರುವ ವಿದ್ಯುತ್​ ಬಿಕ್ಕಟ್ಟು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಕಲ್ಲಿದ್ದಲು ಆಮದು ದುಬಾರಿಯಾದ ಕಾರಣ ಶಾಖೋತ್ಪನ್ನ ಸ್ಥಾವರಗಳು ವಿದ್ಯುತ್ ಉತ್ಪಾದನೆ ಕಡಿಮೆ ಮಾಡಿವೆ. ದೇಶೀಯ ಕಲ್ಲಿದ್ದಲು ಗಣಿಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಸರಾಸರಿ ಉತ್ಪಾದನೆಯಲ್ಲಿ ಶೇ 43 ಇಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಒಂದು ಲೆಕ್ಕಾಚಾರದ ಪ್ರಕಾರ ದೇಶೀಯ ಕಲ್ಲಿದ್ದಲು ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. 2021ರ ಏಪ್ರಿಲ್​ನಿಂದ ಸೆಪ್ಟೆಂಬರ್​ ವೇಳೆಯಲ್ಲಿ 31.50 ಕೋಟಿ ಟನ್​ ಕಲ್ಲಿದ್ದಲನ್ನು ಭಾರತದಲ್ಲಿ ತೆಗೆಯಲಾಗಿದೆ. ಕಳೆದ ವರ್ಷ, ಅಂದರೆ 2020ನೇ ಇಸವಿಯ ಇದೇ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ 28.20 ಕೋಟಿ ಟನ್​ ಇತ್ತು. ಉತ್ಪಾದನೆ ಹೆಚ್ಚಾದರೂ ಬೇಡಿಕೆ ಹೆಚ್ಚಾಗಿರುವ ಕಾರಣ ಕೊರತೆ ಕಾಣಿಸಿಕೊಂಡಿದೆ.

ಉತ್ಪಾದನೆ, ಬಳಕೆ, ಪರಿಣಾಮ
ಕಲ್ಲಿದ್ದಲು ಬಳಕೆಯಲ್ಲಿ ವಿದ್ಯುತ್​ ಉತ್ಪಾದನೆಯದ್ದೇ ಸಿಂಹಪಾಲು. ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಸ್ಥಾವರಗಳು ಗಣಿಗಳಿಂದ ಹೊರತೆಗೆದ ಕಲ್ಲಿದ್ದಲು ಪ್ರಮಾಣದ ಶೇ 70ರಷ್ಟು ಬಳಕೆ ಮಾಡುತ್ತಿವೆ. ದೇಶದ ಒಟ್ಟು ಬೇಡಿಕೆಯ ಶೇ 80ರಷ್ಟು ಪ್ರಮಾಣವನ್ನು ಸರ್ಕಾರಿ ಸ್ವಾಮ್ಯದ ಕೋಲ್​ ಇಂಡಿಯಾ ಲಿಮಿಟೆಡ್​ (ಸಿಐಎಲ್​) ಪೂರೈಕೆ ಮಾಡುತ್ತದೆ. ಪ್ರಸ್ತುತ ಕೋಲ್ ಇಂಡಿಯಾ ಲಿಮಿಟೆಡ್ ದಿನಕ್ಕೆ 1,501 ಟನ್​ ಕಲ್ಲಿದ್ದಲು ಮೊಗೆಯುತ್ತಿದೆ. ದೇಶದಲ್ಲಿ 135 ಶಾಖೋತ್ಪನ್ನ ಸ್ಥಾವರಗಳಿದ್ದು, 65ಕ್ಕೂ ಹೆಚ್ಚು ಸ್ಥಾವರಗಳಲ್ಲಿ ಕೇವಲ ಎರಡು ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ದಾಸ್ತಾನು ಇದೆ. ವಿದ್ಯುತ್ ಬಳಕೆಯ ಪ್ರಮಾಣವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 2021ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ 1.24 ಲಕ್ಷ ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಎರಡು ವರ್ಷಗಳ ಹಿಂದೆ, ಅಂದರೆ 2019ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ​ ಈ ಪ್ರಮಾಣ 1.06 ಲಕ್ಷ ಕೋಟಿ ಯೂನಿಟ್​ ಮಾತ್ರವೇ ಇತ್ತು.

Coal Crisis Explained Threat of Electricity Scarcity in India

ಇದನ್ನೂ ಓದಿ: ಕರ್ನಾಟಕಕ್ಕೆ ಪವರ್‌ ಶಾಕ್‌ : ಕಲ್ಲಿದ್ದಲ ಕೊರತೆಯಿಂದ ವಿದ್ಯುತ್‌ ಅಭಾವ
ಇದನ್ನು ಓದಿ: GODD NEWS : ಬಡವರಿಗೆ ಇನ್ಮುಂದೆ ಉಚಿತ ವಿದ್ಯುತ್‌ : ಬೆಳಕನ್ನೇ ಕಾಣದವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ

Comments are closed.