ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ಮಹಾಮಾರಿ ಸಿಲಿಕಾನ್ ಸಿಟಿಗೆ ಶಾಕ್ ಕೊಟ್ಟಿದೆ. ಬೆಂಗಳೂರಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ವಿರುದ್ದ ಹೋರಾಡುತ್ತಿರುವ ಪೊಲೀಸರಿಗೂ ಸೋಂಕು ವ್ಯಾಪ್ತಿಸುತ್ತಿದ್ದು ಬೆಂಗಳೂರಲ್ಲಿ 8 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ಕೊರೊನಾ ಮಹಾಮಾರಿ ಬೆಂಗಳೂರಲ್ಲಿ ಕಳೆದೊಂದು ವಾರದಿಂದಲೂ ಆರ್ಭಟಿಸುತ್ತೇ ಇದೆ. ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವವರ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದ್ದು ಸೋಂಕು ಇನ್ನಷ್ಟು ವ್ಯಾಪಿಸೋ ಆತಂಕ ಎದುರಾಗಿದೆ. ಈ ನಡುವಲ್ಲೇ ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜೀವನ್ ಭೀಮಾ ನಗರ, ಜೆ.ಜೆ.ನಗರ, ಹೆಣ್ಣೂರು, ಜಯನಗರ, ಹೆಬ್ಬಗೋಡಿ, ಸೋಲದೇವನಹಳ್ಳಿ, ಸಿಟಿ ಮಾರ್ಕೆಟ್, ಭೈಯಪ್ಪನಹಳ್ಳಿ ಠಾಣೆ ಸೀಲ್ ಡೌನ್ ಮಾಡಲಾಗಿದೆ. 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.

ಹೀಗಾಗಿ ಇನ್ನು ಮುಂದೆ ನಗರದ ಪೊಲೀಸರು ಬಂಧಿತ ಆರೋಪಿಗಳನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆತರುವುದಿಲ್ಲ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಮೊದಲು ಅಲ್ಲಿ ಕೊರೋನಾ ಪರೀಕ್ಷೆಯಾಗಿ ವರದಿ ನೆಗೆಟಿವೇ ಬಂದ ನಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿ ತಿಳಿಸಿದೆ.