ಉಡುಪಿ : ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಕೃಷ್ಣನಗರಿ ಉಡುಪಿ ರಾಜ್ಯದಲ್ಲಿಯೇ ಅಗ್ರಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 92 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದ್ರೆ ಕೇವಲ 87 ಮಂದಿಗೆ ಯಾವುದೇ ರೋಗಲಕ್ಷಣ ಪತ್ತೆಯಾಗದಿರುವುದು ಆತಂಕ ಮೂಡಿಸಿದೆ.

ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಬಹುತೇಕರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಕಳೆದೊಂದು ವಾರದಿಂದಲೂ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ ಒಟ್ಟು 564 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರದಲ್ಲಿ ಶೇ.90ರಷ್ಟು ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರೇ ಆಗಿದ್ದಾರೆ. ಮುಂಬೈನಿಂದ ಆಗಮಿಸುತ್ತಿದ್ದಂತೆಯೇ ಗಂಟಲು ದ್ರವದ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಆದರೆ ಹಲವರಿಗೆ ಕ್ವಾರಂಟೈನ್ ಅವಧಿ ಮುಕ್ತಾಯವಾಗಿ ಮನೆಗೆ ತೆರಳಿದ ನಂತರದಲ್ಲಿಯೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ಗುರುವಾರ ಜಿಲ್ಲೆಯಲ್ಲಿ ಒಟ್ಟು 92 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಪೈಕಿ ಕೇವಲ 5 ಮಂದಿಗೆ ಮಾತ್ರವೇ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿದೆ. ಆದರೆ ಉಳಿದ 87 ಮಂದಿಗೆ ಯಾವುದೇ ರೀತಿಯ ಜ್ವರ, ಶೀತ ಸೇರಿದಂತೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ.

ಕೊರೊನಾ ಸೋಂಕು ದೃಢಪಟ್ಟಿರುವವರನ್ನು ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕ್ವಾರಂಟೈನ್ ಅವಧಿಯನ್ನು ಮುಗಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿರುವ ವ್ಯಕ್ತಿಯ ಬಗ್ಗೆ ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದ ಅವಧಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ವರದಿಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟಿ 564 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಈಗಾಗಲೇ 82 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 481 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂಬೈನಿಂದ ಆಗಮಿಸಿದ್ದ ವ್ಯಕ್ತಿಯೋರ್ವನನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಒಂದೆಡೆ ಮುಂಬೈನಿಂದ ಆಗಮಿಸುತ್ತಿರುವವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ರೆ, ಇನ್ನೊಂದೆಡೆ ಸೋಂಕು ಬಾಧಿಸಿದ್ರೂ ಕೂಡ ಯಾವುದೇ ರೋಗ ಲಕ್ಷಣ ಕಂಡುಬಾರದೆ ಇರುವುದು ಆತಂಕ ಮೂಡಿಸಿದೆ.