ದೇವಾಲಯ, ಹೋಟೆಲ್, ರೆಸ್ಟೋರೆಂಟ್ ಆರಂಭ : ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯಲ್ಲೇನಿದೆ ?

0

ನವದೆಹಲಿ : ಕೇಂದ್ರ ಸರಕಾರ ದೇಶದಾದ್ಯಂತ ಅನ್ ಲಾಕ್ ಆದೇಶ ಜಾರಿಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 8 ರಿಂದ ದೇಶದಾದ್ಯಂತ ಹೋಟೆಲ್, ರೆಸ್ಟೋರೆಂಟ್ ಹಾಗೂ ದೇವಾಲಯಗಳನ್ನು ತೆರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಸರಕಾರದ ಮಾರ್ಗಸೂಚಿಯಲ್ಲೇನಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ದೇವಸ್ಥಾನಕ್ಕೆ ಮಾರ್ಗಸೂಚಿ

ದೇಶದಾದ್ಯಂತ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಆಡಳಿತ ಮಂಡಳಿ, ಅರ್ಚಕರು ದೇವಸ್ಥಾನಗಳನ್ನು ಶುಚಿಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ಸೋಮವಾರದಿಂದಲೇ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಿರುವ ಹಿನ್ನೆಲೆಯಲ್ಲೀಗ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.

ಯಾವುದೇ ಕಾರಣಕ್ಕೂ ಕಂಟೈನ್ಮೆಂಟ್ ಝೋನ್ ನಲ್ಲಿರುವ ದೇವಸ್ಥಾನಗಳನ್ನು ತೆರೆಯುವಂತಿಲ್ಲ. ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸ್ ಮಾಡಬೇಕು. ಅಲ್ಲದೇ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸಲು ಹಾಗೂ ಹೊರಗೆ ಹೋಗಲು ಪ್ರತ್ಯೇಕ ಪ್ರವೇಶ ದ್ವಾರಗಳ ವ್ಯವಸ್ಥೆಯನ್ನು ಮಾಡಲೇ ಬೇಕು. ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳನ್ನು ಮುಟ್ಟಿ ಪೂಜಿಸುವಂತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿಷೇಧ ಹೇರಲಾಗಿದೆ. ಹಾಡು, ಭಾಷಣ, ಭಜನಾ ಕಾರ್ಯಕ್ರಮವನ್ನು ನಡೆಸುವಂತಿಲ್ಲ. ಪ್ರಾರ್ಥನೆ ಮಾಡಲು ಪ್ರತ್ಯೇಕವಾಗಿರುವ ಮ್ಯಾಟ್ ಬಳಕೆ ಮಾಡಬೇಕು.

ಹೋಟೆಲ್, ರೆಸ್ಟೋರೆಂಟ್ ಮಾರ್ಗಸೂಚಿ

ಸುಮಾರು ಎರಡೂವರೆ ತಿಂಗಳ ಬಳಿಕ ದೇಶದಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ಆರಂಭಗೊಳ್ಳುತ್ತಿವೆ. ಕೊರೊನಾ ಸೋಂಕು ಹರಡದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಹೋಟೆಲ್, ರೆಸ್ಟೋರೆಂಟ್ ಸಿಬ್ಬಂಧಿ ಹಾಗೂ ಗ್ರಾಹಕರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗಿದೆ. ರೆಸ್ಟೋರೆಂಟ್ ಗಳು ಕಡ್ಡಾಯವಾಗಿ ಟೇಕ್ ಅವೇ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕು. 65 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ಗ್ರಾಹಕರಿಗೆ ಪಾರ್ಸೆಲ್ ಗಳನ್ನು ಯಾವುದೇ ಕಾರಣಕ್ಕೆ ಕೈಗಳಿಂದ ನೀಡುವಂತಿಲ್ಲ. ಹೋಂ ಡೆಲಿವರಿ ಬಾಯ್ಸ್ ಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲೇ ಬೇಕು. ರೆಸ್ಟೋರೆಂಟ್ ಗಳಲ್ಲಿ ಪೇಪರ್ ನ್ಯಾಪ್ಕಿನ್ ಬಳಕೆ ಮಾಡಲು ಸೂಚನೆಯನ್ನು ನೀಡಲಾಗಿದೆ. ಬಫೆ ಸಿಸ್ಟಂನಲ್ಲಿಯೂ ಸಾಮಾಜಿಕ ಅಂತರವನ್ನು ಕಾಪಾಡಲೇ ಬೇಕು. ಇನ್ನು ಪಾರ್ಕಿಂಗ್ ಪ್ರದೇಶದಲ್ಲಿಯೂ ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ಕೇಂದ್ರ ಸರಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.

Leave A Reply

Your email address will not be published.