ಚೆನ್ನೈ: ಕೊರೊನಾ ಲಸಿಕೆಯ ವಿಚಾರದಲ್ಲಿ ಆ ಗ್ರಾಮದ ಜನರು ಭಯಗೊಂಡಿಸ್ದರು. ತಪ್ಪು ತಿಳುವಳಿಕೆಯಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಆದರೆ ಸಾಮಾಜಿಕ ಕಾರ್ಯಕರ್ತರೊಬ್ಬರ ಐಡಿಯಾ ಇದೀಗ ಫಲಕೊಟ್ಟಿದೆ. ಅಲ್ಲದೇ ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಉಲುಂದರ್‌ಪೇಟೆ ಬಳಿಯ ಎಂ.ಗುನ್ನಥೂರು ಗ್ರಾಮದಲ್ಲಿ 3,000 ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಜನರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ 20 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ. ಆದರೆ ಭಯದಿಂದ ಕೇವಲ 50 ಮಂದಿಯಷ್ಟೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆತಂಕ ಮೂಡಿಸಿತ್ತು.
ಗ್ರಾಮಸ್ಥರು ಭಯ ಮತ್ತು ತಪ್ಪು ತಿಳುವಳಿಕೆಯಿಂದ ಲಸಿಕೆ ಹಾಕಿಸಿ ಕೊಳ್ಳದ ವಿಚಾರ ಸಾಮಾಜಿಕ ಕಾರ್ಯಕರ್ತ ತುಂಬಿದುರೈ ಅವರ ಕಿವಿಗೆ ಬಿದ್ದಿದೆ. ಕೂಡಲೇ ಲಸಿಕೆ ಹಾಕಿಸಿಕೊಳ್ಳುವವರಿಗೆ ಭರ್ಜರಿ ಉಡುಗೊರೆ ಘೋಷಣೆ ಮಾಡಿದ್ದಾರೆ. ಲಸಿಕೆ ಹಾಕಿಸಿ ಕೊಳ್ಳಲು ಬರುವವರಿಗೆ ಪ್ಲೇಟ್, ಗ್ಲಾಸ್, ಟಿಫನ್ ಬಾಕ್ಸ್ ಮತ್ತು ಪ್ಲಾಸ್ಟಿಕ್ ಬಿಂದಿಗೆಯಂತಹ ವಸ್ತುಗಳನ್ನು ನೀಡವುದಾಗಿ ಘೋಷಿಸಿದ್ದಾರೆ.
ಈ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಲಸಿಕಾ ಶಿಬಿರದತ್ತ ಜನ ಸಾಗರವೇ ಹರಿದು ಬರುತ್ತಿದೆ. ಈ ಹಿಂದೆ ವೈದ್ಯರೇ ಕರೆದು ಕರೆದು ಲಸಿಕೆ ನೀಡುತ್ತೇವೆ ಎಂದರೂ ಹಾಕಿಸಿಕೊಳ್ಳದ ಜನ ಇದೀಗ ಸರತಿ ಸಾಲಲ್ಲಿ ಗಂಟೆಗಟ್ಟಲೆ ಕಾದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇದೀಗ ಸಾಮಾಜಿಕ ಕಾರ್ಯಕರ್ತ ತಂಬಿದುರೈ ಮತ್ತು ಅವರ ತಂಡದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತಮ್ಮ ಕಾರ್ಯವನ್ನು ಸುತ್ತಮುತ್ತಲಿನ ಗ್ರಾಮಗಳಿಗೂ ವಿಸ್ತರಿಸುವಂತೆ ಬೇಡಿಕೆ ಶುರುವಾಗಿದೆ ಎನ್ನಲಾಗಿದೆ.