ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ಬಿಬಿಎಂಪಿ ಕಾರ್ಪೋರೇಟರ್ ಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.ಕಂಟನ್ಮೆಂಟ್ ಝೋನ್ ನಲ್ಲಿ ಓಡಾಕೊಂಡಿದ್ದ ಪಾದರಾಯನಪುರದ ಕಾರ್ಪೊರೇಟರ್ ಗೆ ಕೊರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ಪತ್ನಿ, 3 ಮಕ್ಕಳು, ಇಬ್ಬರು ಮನೆಕೆಲಸವರು ಹಾಗೂ 7 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಕಾರ್ಪೋರೇಟರ್ ಹಲವು ಸಮಯಗಳಿಂದಲೂ ಜನರು, ಅಧಿಕಾರಿಗಳ ಸಂಪರ್ಕದಲ್ಲಿದ್ದರು. ಹೀಗಾಗಿ ಕಾರ್ಪೋರೇಟರ್ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸುವುದು ಬಹುತೇಕ ಖಚಿತವಾಗಿದ್ದು, ಪಾದರಾಯನಪುರ ವಾರ್ಡಿನ ನಿವಾಸಿಗಳಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೂ ಕೊರೊನಾ ಭಯ ಶುರುವಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟು 303 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 10 ಮಂದಿ ಈಗಾಗಲೇ ಕೊರೊನಾ ಸೋಂಕಿಗೆ ಬಲಿಯಾಗಿದ್ರೆ, 151 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದ್ರೆ ಕಳೆದೊಂದು ತಿಂಗಳಿನಿಂದಲೂ ಪಾದರಾಯನಪುರ ಬೆಂಗಳೂರಿನ ಮಟ್ಟಿಗೆ ಕೊರೊನಾ ಹಾಟ್ ಸ್ಟಾಟ್ ಆಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿಯೇ ಪಾದರಾಯನಪುರವನ್ನು ಕಂಟೇನ್ಮೆಂಟ್ ವ್ಯಾಪ್ತಿಗೆ ಒಳಪಡಿಸಲಾಗಿತ್ತು.

ಇದೀಗ ಕಾರ್ಪೋರೇಟರ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು, ಕಾರ್ಪೋರೇಟರ್ ಜೊತೆಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಕಲೆಹಾಕುತ್ತಿದ್ದಾರೆ.