ನವದೆಹಲಿ : ಇಷ್ಟು ದಿನ ಮನುಷ್ಯರನ್ನು ಕಾಡುತ್ತಿದ್ದ ಕೊರೊನಾ ವೈರಸ್ ಸೋಂಕು ಇದೀಗ ಹುಲಿಗಳಲ್ಲಿಯೂ ಕಾಣಿಸಿಕೊಂಡಿದೆ. ಅಮೇರಿಕಾದ ಮೃಗಾಲಯದಲ್ಲಿ ಸುಮಾರು 6 ಹುಲಿ ಹಾಗೂ ಸಿಂಹಗಳಿಗೂ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಮೃಗಾಲಯಗಳಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ.

ಅಮೇರಿಕಾದ ನ್ಯೂಯಾರ್ಕ್ ನ ಬ್ರಾಂಕ್ಸ್ ಮೃಗಾಲಯದಲ್ಲಿರುವ 4 ವರ್ಷ ಪ್ರಾಯದ ಒಂದು ಹಿಮಾಲಯನ್ ಹುಲಿಗೆ ಸೋಂಕು ತಗುಲಿದ್ದು, ಇತ್ತೀಚೆಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಇದು ದೃಢವಾಗಿದೆ. ಅಂತೆಯೇ ಈ ಒಂದು ಹುಲಿ ಮಾತ್ರವಲ್ಲದೇ ಈ ಹುಲಿ ಜೊತೆಗಿದ್ದ ಇತರೆ 6 ಹುಲಿಗಳು ಹಾಗೂ ಸಿಂಹಗಳೂ ಅನಾರೋಗ್ಯಕ್ಕೆ ತುತ್ತಾಗಿದೆ.

ಆ ಮೂಲಕ ಅಮೆರಿಕದಲ್ಲಿ ವೈರಸ್ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಾಣಿಗಳಲ್ಲಿ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಅಮೇರಿಕಾದ ಮೃಗಾಲಯದಲ್ಲಿ ಕಾಡುಪ್ರಾಣಿಗಳಿಗೆ ಕೊರೊನಾ ತಗಲುತ್ತಿದ್ದಂತೆಯೇ ಭಾರತದಲ್ಲಿಯೂ ಕೇಂದ್ರ ಅರಣ್ಯ ಇಲಾಖೆ ಮುನ್ನೆಚ್ಚರಿಕೆಯನ್ನು ಕೈಗೊಂಡಿದೆ.

ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೆ ನಿಗಾ ಇರಿಸಲಾಗಿದ್ದು, ದೂರದಿಂದಲೇ ಪ್ರಾಣಿಗಳಿಗೆ ಆಹಾರವನ್ನು ನೀಡುವಂತೆ ಮೃಗಾಲಯದ ಸಿಬ್ಬಂಧಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಅನಾರೋಗ್ಯಕ್ಕೆ ತುತ್ತಾಗುವ ಪ್ರಾಣಿಗಳ ಆರೋಗ್ಯ ತಪಾಸಣೆ ನಡೆಸಲು ಇಲಾಖೆ ಸೂಚನೆಯನ್ನು ನೀಡಿದೆ. ಆದರೆ ಇದುವರೆಗೂ ದೇಶದಲ್ಲಿ ಪ್ರಾಣಿಗಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿಲ್ಲ.

ಕೊರೊನಾ ಕುರಿತು ಸಂಶೋಧನೆ ನಡೆಸುತ್ತಿರುವ ಹಾಂಕಾಂಗ್ ವಿಜ್ಞಾನಿಗಳು ಮನೆಯಲ್ಲಿ ಸಾಕುವ ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳು ವೈರಸ್ ಅನ್ನು ವ್ಯಕ್ತಿಗಳಿಗೆ ಹರಡುವುದಿಲ್ಲ. ಆದರೆ ಈ ಪ್ರಾಣಿಗಳ ಮಾಲೀಕರು ಪ್ರಾಣಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಾಗ ಅಂದರೆ ತಬ್ಬಿಕೊಂಡಾಗ, ಮುತ್ತು ನೀಡಿದಾಗ, ಸ್ನಾನ ಮಾಡಿಸುವಾಗ ಅದರ ಜೊಲ್ಲು ಮೈಮೇಲೆ ಬಿದ್ದರೆ ಆಗ ವೈರಸ್ ವ್ಯಕ್ತಿಗೆ ಹರಡುವ ಸಾಧ್ಯತೆ ಗಳಿರುತ್ತದೆ ಎಂದು ಹೇಳಿದ್ದಾರೆ.