ಡಿ.ವಿ.ಸದಾನಂದ ಗೌಡ ಮತ್ತೆ ಸಿಎಂ..!! ಏನಿದೆ ಗೊತ್ತಾ ಬಿಜೆಪಿ ಲೆಕ್ಕಾಚಾರ

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್‌ ಸಿಎಂ ಬದಲಾವಣೆಗೆ ಮುಂದಾಗಿದೆ. ಯಡಿಯೂರಪ್ಪ ಹುದ್ದೆಯಿಂದ ಕೆಳಗಿಳಿದ್ರೆ ಸಿಎಂ ಯಾರೂ ಅನ್ನೋ ಪ್ರಶ್ನೆಗೆ ಹೈಕಮಾಂಡ್‌ ಉತ್ತರ ನೀಡಿದ್ದು, ಸಂಸದ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗೋದು ಬಹುತೇಕ ಖಚಿತ.

ನಾಯಕತ್ವದ ವಿಚಾರದಲ್ಲಿಯೇ ಬಿಜೆಪಿ ಸದ್ಯ ಒಡೆದ ಮನೆ. ಸಿಎಂ ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಿರೋಧಿ ಪಾಳಯ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಈ ನಡುವಲ್ಲೇ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಬೀಳ್ಕೊಡಲು ಹೈಕಮಾಂಡ್‌ ಮುಂದಾಗಿದೆ. ರಾಜ್ಯದಲ್ಲಿ ಸಿಎಂ ಹುದ್ದೆಗೆ ಒಂದಿಷ್ಟು ಮಂದಿಯ ಹೆಸರು ಕೇಳಿಬರುತ್ತಿದೆ. ಆದ್ರೆ ಆ ಹೆಸರುಗಳ ಕುರಿತು ಪಕ್ಷದಲ್ಲಿಯೇ ವಿರೋಧವಿದೆ. ಬಣದ ಶಾಸಕರನ್ನು ಸಿಎಂ ಹುದ್ದೆಯಲ್ಲಿ ಕೂರಿಸಿದ್ರೆ ಸರಕಾರಕ್ಕೆ ಡ್ಯಾಮೇಜ್‌ ಆಗೋದು ಖಚಿತ. ಇನ್ನೊಂದೆಡೆ ಪಕ್ಷದ ಬಂಡಾಯ ನಾಯಕರ ಜೊತೆಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲೇ ಬೇಕಾದ ಸ್ಥಿತಿಯಲ್ಲಿದೆ ಬಿಜೆಪಿ. ಹೀಗಾಗಿ ಬಂಡಾಯದ ಜೊತೆಗೆ ಪಕ್ಷವನ್ನು ಮುನ್ನಡೆಸುವ ಸಮರ್ಥರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ಬಿಜೆಪಿ ಹೈಕಮಾಂಡ್‌ ಹಾಗೂ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಎರಡು ಬಣ ಇರೋದು ಬಹಿರಂಗವಾಗಿದೆ. ಎರಡೂ ಬಣಗಳನ್ನು ಒಗ್ಗೂಡಿಸಿಕೊಂಡು ಮುಂದಿನ ಚುನಾವಣೆ ಎದುರಿಸೋದು ಬಿಜೆಪಿಗೆ ಅನಿವಾರ್ಯ. ಇದೇ ಕಾರಣದಿಂದಲೇ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿಸಲು ಬಿಜೆಪಿ ಮುಂದಾಗಿದೆ. 2011ರಲ್ಲಿ ಯಡಿಯೂರಪ್ಪ ಜೈಲಿಗೆ ಹೋಗುವ ಅನಿವಾರ್ಯ ಸಂದರ್ಭದಲ್ಲಿ ಆಪ್ತರಾಗಿದ್ದ ಡಿ.ವಿ.ಸದಾನಂದ ಗೌಡರಿಗೆ ಯಡಿಯೂರಪ್ಪ ಪಟ್ಟಕಟ್ಟಿದ್ದರು. ಅಲ್ಲದೇ ಪಕ್ಷದ ಗೌಪ್ಯ ಮತದಾನದಲ್ಲಿಯೂ ಸದಾನಂದ ಗೌಡರು ಆಯ್ಕೆಯಾಗಿದ್ದರು. ನಂತರದಲ್ಲಿ ಸಿಎಂ ಹುದ್ದೆಯಿಂದ ಪಕ್ಷ ಕೆಳಗಿಳಿಯುವಂತೆ ಸೂಚಿಸುತ್ತಲೇ ಡಿವಿಎಸ್‌ ರಾಜೀನಾಮೆಯನ್ನು ನೀಡಿದ್ದರು. ಇದೀಗ ಮತ್ತೊಮ್ಮೆ ಡಿ.ವಿ.ಸದಾನಂದ ಗೌಡರನ್ನು ಕರೆತರುವುದು ಖಚಿತ ಎನ್ನುತ್ತಿದೆ ಬಿಜೆಪಿಯ ಉನ್ನತ ಮೂಲಗಳು.

ಬಾಲ್ಯದಿಂದಲೂ ಸಂಘ ಪರಿವಾರದ ಜೊತೆಗೆ ಗುರುತಿಸಿಕೊಂಡಿರುವ ಡಿ.ವಿ.ಸದಾನಂದ ಗೌಡರು ಈಗಾಗಲೇ 2 ಬಾರಿ ಶಾಸಕರಾಗಿ, 4 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಡಿವಿಎಸ್‌ ಪಾತ್ರ ಮಹತ್ತರವಾದುದು. ಸಂಘ ಪರಿವಾರ, ಮೂಲ ಬಿಜೆಪಿ ನಾಯಕರು, ವಲಸಿಗ ಬಿಜೆಪಿ ನಾಯಕರು ಹಾಗೂ ಕೇಂದ್ರ ನಾಯಕರ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಹೀಗಾಗಿ ಡಿ.ವಿ.ಸದಾನಂದ ಗೌಡರಿಗೆ ಪಟ್ಟ ಕಟ್ಟೋದಕ್ಕೆ ಬಹುತೇಕ ಬಿಜೆಪಿ ನಾಯಕರು ಒಲವು ಹೊಂದಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಖುದ್ದು ರಾಜ್ಯದ ಕಡೆಗೆ ಗಮನಹರಿಸುವಂತೆ ಸದಾನಂದ ಗೌಡರಿಗೆ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ಸದಾನಂದ ಗೌಡರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಕೂಡ ನಾಯಕತ್ವದಿಂದ ಗೌರವಯುತವಾಗಿ ಕೆಳಗಿಳಿಯಲು ಸಜ್ಜಾಗಿದ್ದಾರೆ. ಆದರೆ ತಾನು ಒಪ್ಪುವ ಅಭ್ಯರ್ಥಿಯನ್ನೇ ಸಿಎಂ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಒಂದು ಮೂಲದ ಪ್ರಕಾರ ಆರ್.ಅಶೋಕ್‌, ಮುರುಗೇಶ್‌ ನಿರಾಣಿ ಅವರನ್ನು ಸಿಎಂ ಮಾಡಲು ಆರಂಭದಲ್ಲಿ ಯಡಿಯೂರಪ್ಪ ಉತ್ಸಾಹ ತೋರಿದ್ದರು. ಆದ್ರೆ ಇದೀಗ ಪಕ್ಷದ ಹಿತದೃಷ್ಟಿಯಿಂದಾಗಿ ಯಡಿಯೂರಪ್ಪ ಕೂಡ ಸದಾನಂದ ಗೌಡರಿಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದ್ದು, ಸಿಎಂ ಪುತ್ರ ವಿಜಯೇಂದ್ರ ಅವರು ಸಂಪುಟ ಸೇರುವುದು ಬಹುತೇಕ ಖಚಿತ.

ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತಂತೆ ಕೇಂದ್ರ ನಾಯಕರಿಗೆ ವರದಿಯನ್ನು ಸಲ್ಲಿಸಿದ್ದಾರೆ. ಎಲ್ಲಾ ಶಾಸಕರಿಂದಲೂ ಖುದ್ದು ಯಾರು ಸಿಎಂ ಆಗಬಹುದು ಅನ್ನೋ ಮಾಹಿತಿಯನ್ನೂ ಕಲೆ ಹಾಕಿದ್ದಾರೆ. ಆದ್ರೆ ಬಹುತೇಕ ಶಾಸಕರು ಸಿಎಂ ಹುದ್ದೆಗೆ ಕೇಳಿಬಂದಿರುವ ಹೆಸರುಗಳ ಕುರಿತು ಅಪಸ್ವರ ಎತ್ತಿದ್ದಾರೆ. ಹೊಸಬರ ಕೈಗೆ ಅಧಿಕಾರ ನೀಡುವ ಬದಲು ಅನುಭವಿ ಹಾಗೂ ಶಾಂತ ಸ್ವಭಾವದ ಡಿ.ವಿ.ಸದಾನಂದ ಗೌಡರು ಓಕೆ ಅನ್ನುವ ಕುರಿತು ಬಹುತೇಕ ಶಾಸಕರು ಅಭಿಪ್ರಾಯ ಮಂಡಿಸಿದ್ದಾರೆ. ಪಕ್ಷದ ಶಿಸ್ತು ಪಾಲನೆಗೆ ಡಿವಿಎಸ್‌ ಸೂಕ್ತ ಅನ್ನೋ ಮಾತು ಕೇಳಿಬರುತ್ತಿದೆ.

ಜೆಡಿಎಸ್‌ ಪಕ್ಷ ಒಕ್ಕಲಿಗರಾಗಿರೋ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಕಾಂಗ್ರೆಸ್‌ ಒಕ್ಕಲಿಗರಾದ ಡಿ.ಕೆ.ಶಿವಕುಮಾರ್‌ ಹಾಗೂ ಕುರುಬ ಸಮುದಾಯದ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂಬರುವ ಚುನಾವಣೆಗೆ ಸಜ್ಜಾಗುತ್ತಿದೆ.

ಎರಡೂ ಪಕ್ಷಗಳು ಒಕ್ಕಲಿಗರಿಗೆ ಮಣೆ ಹಾಕಿದ್ದು, ಬಿಜೆಪಿ ಕೂಡ ಉಳಿದ ಅವಧಿಗೆ ಒಕ್ಕಲಿಗ ನಾಯಕರಾಗಿರೋ ಸದಾನಂದ ಗೌಡರಿಗೆ ಪಟ್ಟಕಟ್ಟಲು ಪ್ಲ್ಯಾನ್‌ ಮಾಡಿಕೊಂಡಿದೆ. ಈ ಮೂಲಕ ಒಕ್ಕಲಿಗರನ್ನು ಪಕ್ಷಕ್ಕೆ ಸೆಳೆಯುವ ಜೊತೆಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ರೆ ವೀರಶೈವ, ಲಿಂಗಾಯಿತರು ಕೂಡ ಪಕ್ಷದ ಜೊತೆಯಲ್ಲೇ ಉಳಿದುಕೊಳ್ಳಲಿದ್ದಾರೆ ಅನ್ನೋದು ಸದ್ಯದ ಲೆಕ್ಕಾಚಾರ.

Comments are closed.