
ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಫಾಸ್ಟ್ಯಾಗ್ ನ್ನು ಕಡ್ಡಾಯಗೊಳಿಸಿದೆ. ಆದರೆ ಬಹುತೇಕ ವಾಹನಗಳ ಮಾಲೀಕರು ಫಾಸ್ಟ್ಯಾಗ್ ಬಳಕೆ ಮಾಡುತ್ತಿಲ್ಲ.

ಟೋಲ್ ಪ್ಲಾಜಾಗಳಲ್ಲಿ ಕ್ಯಾಶ್ ಕೊಟ್ಟು ಸಂಚಾರ ಮಾಡುತ್ತಿದ್ದಾರೆ. ಆದರೆ ಇನ್ಮುಂದೆ ವಾಹನಗಳಿಗೆ ಫಾಸ್ಟ್ಯಾಗ್ ಇಲ್ಲದಿದ್ದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸೌಲಭ್ಯ ಸೀಗುವುದಿಲ್ಲ.

ಹೌದು, 2021ರ ಎಪ್ರೀಲ್ ತಿಂಗಳಿನಿಂದ ಇಂತಹದ್ದೊಂದು ನಿಯಮ ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನಗಳ ತ್ವರಿತ ಸಂಚಾರದ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಶುಲ್ಕ ಪಾವತಿ ವಿಧಾನವನ್ನು ಈಗಾಗಲೇ ಕಡ್ಡಾಯ ಗೊಳಿಸಲಾಗಿದೆ. ಅಲ್ಲದೇ ಟೋಲ್ ದರ ಪಾವತಿಯಲ್ಲಿ ವಿನಾಯಿತಿಯನ್ನು ಪಡೆಯಬೇಕಾದ್ರೆ ಫಾಸ್ಟ್ಯಾಗ್ ನ್ನು ಕಡ್ಡಾಯವಾಗಿ ಹೊಂದಿರಲೇ ಬೇಕೆಂಬ ನಿಯಮವನ್ನು ರೂಪಿಸಲಾಗಿದೆ.

ಕೇವಲ ಫಾಸ್ಟ್ಯಾಗ್ ನಿಂದ ಟೋಲ್ ವಿನಾಯಿತಿ ಮಾತ್ರವಲ್ಲ, ಇನ್ಮುಂದೆ ಥರ್ಡ್ ಪಾರ್ಟಿ ಇನ್ಶುರೆನ್ಸ್ ಸೌಲಭ್ಯವನ್ನು ಪಡೆಯಬೇಕಾದ್ರೆ ಫಾಸ್ಟ್ಯಾಗ್ ಕಡ್ಡಾಯವಾಗಿ ಹೊಂದಿರಬೇಕು. ಈಗಾಗಲೇ ವಿಮಾ ಕಾಯಿದೆಯಲ್ಲಿಯೇ ತಿದ್ದುಪಡಿಯನ್ನು ಮಾಡಲಾಗುತ್ತಿದ್ದು, ವಿಮಾ ಪ್ರಮಾಣಪತ್ರದಲ್ಲಿಯೇ ಫಾಸ್ಟ್ಯಾಗ್ ಐಡಿಯ ವಿವರಗಳನ್ನು ನೀಡಲಾಗುತ್ತದೆ.

ಕೇಂದ್ರ ಸರಕಾರ ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಕಾರ್ಯವನ್ನು ಮಾಡುತ್ತಿದ್ದು, ಸಂಬಂಧಪಟ್ಟವರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಪಡೆಯುತ್ತಿದೆ ಎಂದು ತಿಳಿದುಬಂದಿದೆ.