ಸೌದಿ ಅರೇಬಿಯಾ : ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಗಳು ತನ್ನ ನೆಲದಲ್ಲಿ ಇಳಿಯಲು ಸೌದಿ ಅರೇಬಿಯಾ ಸರ್ಕಾರ ಇಂದಿನಿಂದ ನಿಷೇಧ ವಿಧಿಸಿದೆ. ಈ ಕುರಿತು ಸೌದಿ ಅರೇಬಿಯಾ ಅಧಿಕೃತ ಆದೇಶ ಹೊರಡಿಸಿದೆ.

ಸೌದಿ ಅರೇಬಿಯಾದ ಜಿಎಸಿಎ (ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ ) ಭಾರತ, ಬ್ರಿಜಿಲ್ ಮತ್ತು ಅರ್ಜೆಂಟೀನಾ ದೇಶಗಳ ವಿಮಾನಗಳು ಸೌದಿ ಅರೇಬಿಯಾದಲ್ಲಿ ಇಳಿಯಲು ನಿಷೇಧ ವಿಧಿಸಿದೆ.

ಈ ದೇಶಗಳಿಂದ ಸೌದಿ ಅರೇಬಿಯಾಗೆ ಬರುವ ಯಾವುದೇ ವ್ಯಕ್ತಿ ಇಲ್ಲಿ ಆಗಮಿಸುವ 14 ದಿನಗಳ ಮೊದಲೇ ಸೌದಿ ಆರೇಬಿಯಾ ವಿಮಾನಯಾನ ಸಚಿವಾಲಯಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ಸರ್ಕಾರದ ಅಧಿಕೃತ ಆಮಂತ್ರಣ ಹೊಂದಿರುವ ಪ್ರಯಾಣಿಕರಿಗೆ ಈ ಅಧಿಸೂಚನೆ ಅನ್ವಯವಾ ಗುವುದಿಲ್ಲ ಎಂದು ಸೌದಿ ಅರೇಬಿಯಾ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತ ಸೇರಿ ಹಲವೆಡೆ ಕರೊನಾ ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸೌದಿ ಅರೇಬಿಯಾದ ವೈಮಾನಿಕ ಪ್ರಾಧಿಕಾರ ಆದೇಶ ಹೊರಡಿಸಿದೆ.

ಸೌದಿಯಿಂದ ಭಾರತ, ಬ್ರೆಜಿಲ್ ಹಾಗೂ ಅರ್ಜೆಂಟೀನಾಗಳಿಗೆ ಬರುವ-ಹೋಗುವ ವಿಮಾನಗಳನ್ನು ನಿಷೇಧಿಸಲಾಗಿದೆ. ಆದರೆ ಸರ್ಕಾರಿ ಆಹ್ವಾನ ಇರುವ ಪ್ರಯಾಣಿಕರಿಗೆ ವಿನಾಯಿತಿ ಇದೆ ಎಂದು ಅದು ಹೇಳಿದೆ.

ಸೌದಿ ಅರೇಬಿಯಾ ಹಾಗೂ ಯುಎಇ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯ ವಲಸಿಗರೇ ನೆಲೆಸಿದ್ದಾರೆ. ಅಗಸ್ಟ್ 28ರಂದು ಹಾಗೂ ಸಪ್ಟೆಂಬರ್ 4ರಂದು ಕೊರೊನಾ ಪಾಸಿಟಿವ್ ಪ್ರಮಾಣ ಪತ್ರ ಹೊಂದಿದ್ದ ಇಬ್ಬರು ಪ್ರಯಾಣಿಕರನ್ನು ಭಾರತದಿಂದ ಕರೆತರಲಾಗಿತ್ತು. ಈ ಹಿನ್ನೆಲೆಯಲ್ಲಿ ದುಬೈ ಸಿವಿಲ್ ಏವಿಯೇಷನ್ ಅಥಾರಿಟಿ (ಡಿಸಿಎಎ) ತನ್ನೆಲ್ಲಾ ವಿಮಾನಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು.

ದುಬೈ ಬೆನ್ನಲ್ಲೇ ಇದೀಗ ಸೌದಿ ಅರೇಬಿಯಾ ಭಾರತೀಯ ಪ್ರಯಾಣಿಕರ ಮೇಲೆ ತನ್ನ ನಿರ್ಬಂಧವನ್ನು ಮುಂದುವರಿಸಲು ಮುಂದಾಗಿದೆ. ಕೊರೋನಾ ವೈರಸ್ ಅಧಿಕವಾಗಿ ಹರಡಿರುವ ದೇಶಗಳಿಗೆ ಮಾತ್ರವೇ ವಿಮಾನ ಪ್ರಯಾಣದ ಮೇಲೆ ನಿಷೇಧವನ್ನು ಹೇರಲಾಗಿದೆ. ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಚಾರ್ಟರ್ಡ್ ಫ್ಲೈಟ್ ಕಂಪನಿಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ.

ಯುಎಇ ಸರ್ಕಾರದ ನಿಯಮಗಳ ಪ್ರಕಾರ, ಭಾರತದಿಂದ ಸೌದಿ ಅರೇಬಿಯಾಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನು ಪ್ರಯಾಣಕ್ಕೆ 96 ಗಂಟೆಗಳ ಮೊದಲು ಮಾಡಿದ ಆರ್‌ಟಿ-ಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತಿದೆ. ದುಬೈ, ಸೌದಿ ಅರೇಬಿಯಾ ಮಾತ್ರವಲ್ಲದೇ ಏರ್ ಇಂಡಿಯಾ ವಿಮಾನದಲ್ಲಿ ಕರೆತಂದ ಹಿನ್ನೆಲೆಯಲ್ಲಿ ಹಾಂಕಾಂಗ್ ಸರಕಾರ ಕೂಡ ಭಾರತೀಯ ವಿಮಾನ ಸೇವೆಗೆ ನಿಷೇಧ ಹೇರಿದೆ.

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವಲ್ಲೇ ಒಂದೊಂದೆ ದೇಶಗಳು ವಿಮಾನಯಾನ ಸೇವೆಯ ಮೇಲೆ ನಿಷೇಧ ಹೇರುತ್ತಿರುವುದು ಭಾರತೀಯ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.