ಅಧ್ಯಯನಗಳ ಪ್ರಕಾರ ಭಾರತದಲ್ಲಿ ಅಂದಾಜು 77 ಮಿಲಿಯನ್ ಜನರು ಅದರಲ್ಲೂ 18 ವರ್ಷಕ್ಕೆ ಮೇಲ್ಪಟ್ಟವರು ಮಧುಮೇಹದಿಂದ (diabetes) ಬಳಲುತ್ತಿದ್ದಾರೆ. ಅದರಲ್ಲೂ ಲಕ್ಷಾಂತರ ಜನರು ಅತ್ಯಧಿಕ ಮಧುಮೇಹಿಗಳಾಗಿರೋದರಿಂದ ಇನ್ಸುಲಿನ್ ಬಳಸಲೇ ಬೇಕಾದ ಸ್ಥಿತಿಯಲ್ಲಿದ್ದಾರೆ. ಹೀಗೆ ಪ್ರತಿನಿತ್ಯ ಚುಚ್ಚಿಕೊಂಡು ಬದುಕುವ ಸ್ಥಿತಿಯಲ್ಲಿರೋ ಜನರಿಗೆ ಸಂಶೋಧನಾ ಸಂಸ್ಥೆಯೊಂದು ಸಿಹಿಸುದ್ದಿ ನೀಡಿದ್ದು ಇನ್ಮುಂದೇ ನೀವು ಇನ್ಸುಲಿನ್ ಸ್ಪ್ರೇ (insulin spray) ಮಾಡಿಕೊಂಡು ಬದುಕುಬಹುದು.
ಸಕ್ಕರೆ ಪ್ರಮಾಣ ಮಿತಿ ಮೀರಿದಾಗ ಇನ್ಸುಲಿನ್ ಇಂಜಕ್ಷನ್ ಅನಿವಾರ್ಯ. ಇದು ರೋಗಿಗಳಿಗೆ ಕಿರಿ ಕಿರಿ ಅನ್ನಿಸುವುದು ಸಹಜ. ವೃದ್ಧಾಪ್ಯದಲ್ಲಿರೋ ರೋಗಿಗಳಿಗಂತೂ ಈ ಇಂಜಕ್ಷನ್ (Injection) ಗಾಗಿ ಬೇರೆಯವರನ್ನು ಅವಲಂಬಿಸಬೇಕಾದ ಸ್ಥಿತಿ ಇದ್ದು, ಇದು ಕೂಡ ಮತ್ತಷ್ಟು ಮಾನಸಿಕ ಹಿಂಸೆ ಸೃಷ್ಟಿಸುತ್ತದೆ. ಆದರೆ ಈಗ ರೋಗಿಗಳ ನೋವಿನ ಕೂಗಿಗೆ ಬೆಲೆ ಬಂದಿದ್ದು ಹೈದ್ರಾಬಾದ್ ಮೂಲದ ನಿಡಲ್ ಫ್ರೀಟೆಕ್ನಾಲಜೀಸ್ ಕಂಪನಿ ಇನ್ಸುಲಿನ್ ಸ್ಪ್ರೇ ಎಂಬ ಔಷಧವನ್ನು ಅಭಿವೃದ್ಧಿ ಪಡಿಸಿದೆ.

ಈ ಸ್ಪ್ರೇ ಗೆ ಓಜುಲಿನ್ ನಾಮಕರಣ ಮಾಡಲಾಗಿದೆ. ಟ್ರಾನ್ಸ್ ಜೀನ್ ಬಯೋಟೆಕ್ ಜೊತೆ ಸಂಯೋಜಿತವಾಗಿರುವ ಈ ಸಂಸ್ಥೆ ಸುಧಾರಿತ ಔಷಧಿಗಳ ತಯಾರಿಕೆಯ ಮೇಲೆಕೆಲಸ ಮಾಡ್ತಿದ್ದು, ತನ್ನ ಹೊಸ ಪ್ರಯೋಗವಾಗಿರುವ ಓಜುಲಿನ್ ಸ್ಪ್ರೇ ಪರಿಶೀಲನೆಗೆ ಕೇಂದ್ರ ಔಷಧ ಗುಣಮಟ್ಟ ನಿಯಮತ್ರತ ಸಂಘಟನೆಗೆ ಅರ್ಜಿ ಸಲ್ಲಿಸಿದೆ.
ಇದುವರೆಗೂ ಈ ಓಜುಲಿನ್ ಸ್ಪ್ರೇ ಯನ್ನು ಮನುಷ್ಯರ ಮೇಲೆ ಪ್ರಯೋಗಿಸಲಾಗಿಲ್ಲ. ಕೆಲವೊಂದು ಪ್ರಾಣಿಗಳ ಮೇಲೆ ಪ್ರಯೋಗಿಸಿ ಅದರ ಫಲಿತಾಂಶವನ್ನು ದಾಖಲಿಸಲಾಗಿದೆ. ಮುಂದಿನ ವರ್ಷ ಸಾಕು ಪ್ರಾಣಿಗಳ ಮೇಲೆಪ್ರಯೋಗಿಸಿದ ಬಳಿಕ ಮುಂದಿನ ಹೆಜ್ಜೆ ಇಡಲಿದೆ.
ಈಗಾಗಲೇ ಓಜುಲಿನ್ ಸ್ಪ್ರೇ ಗಾಗಿ ಕಂಪನಿ 40 ದೇಶಗಳಿಂದ ಪೇಟೆಂಟ್ ಪಡೆದಿದೆ ಎಂದು ನೀಡಲ್ ಫ್ರೀ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ.ಕೆ.ಕೋಟೇಶ್ವರ ರಾವ್ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಶುರುವಾಯ್ತು ಜಿಕಾ ವೈರಸ್ ಭೀತಿ : ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಯ್ತು ಮಾರಕ ವೈರಸ್, ಹೈಅಲರ್ಟ್ ಘೋಷಣೆ

ವೈಜ್ಞಾನಿಕವಾಗಿ ಓರಲ್ ಇನ್ಸುಲಿನ್ ಸಂಶೋಧನೆ ಹೊಸದಲ್ಲ. ಆದರೆ ರಕ್ತದ ಹರಿವು ಇದನ್ನು ಹೀರಿಕೊಳ್ಳುವುದರಲ್ಲಿ ಗಮನಾರ್ಹ ಯಶಸ್ಸು ಸಾಧಿಸಿರಲಿಲ್ಲ. ಆದರೆ ಈ ವಲಯದಲ್ಲಿ ನಮ್ಮ ಸಂಸ್ಥೆ ಗಮನಾರ್ಹ ಪ್ರಗತಿ ಸಾಧಿಸಿದೆ. ಮುಂದಿನ ವರ್ಷ ಇದನ್ನು ಸಾಕುಪ್ರಾಣಿಗಳ ಮೇಲೆ ಪ್ರಯೋಗಿಸುತ್ತೇವೆ. ಇನ್ಸುಲಿನ್ ನ್ಯಾನೋ ಕಣಗಳಾಗಿ ಪರಿವರ್ತಿಸಿ ಅದನ್ನು ರಕ್ತಪ್ರವಾಹಕ್ಕೆ ಬಿಡುಗಡೆ ಮಾಡುವುದರಲ್ಲಿ ಓಜಲಿನ್ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿರೋದರಿಂದ ಗಮನಾರ್ಹ ಬದಲಾವಣೆ ಮಧುಮೇಹ ರೋಗಿಗಳ ಆರೋಗ್ಯದ ಮೇಲಾಗಲಿದೆ ಎಂಬ ಭರವಸೆ ಇದೆ ಎಂದು ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇವಲ ಮಧುಮೇಹ ಮಾತ್ರವಲ್ಲ ಕ್ಯಾನ್ಸರ್ ಹಾಗೂ ಅಲ್ಜೈಮರ್ ರೋಗವೂ ಭಾರತದಲ್ಲಿ ಹೆಚ್ಚಿದೆ. ಅದರಲ್ಲೂ ಕ್ಯಾನ್ಸರ್ ಚಿಕಿತ್ಸೆಯ ಭಯಾನಕತೆಗೆ ರೋಗಿಗಳು ಸಾಯುವ ಸ್ಥಿತಿ ಇದೆ. ಹೀಗಾಗಿ ಮಧುಮೇಹ ಚಿಕಿತ್ಸೆಯ ಜೊತೆಗೆ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್ ಮತ್ತು ಅದುರು ರೋಗಕ್ಕೂ ಬಾಯಿ ಮತ್ತು ಮೂಗಿಗೆ ಸ್ಪ್ರೇಗಳನ್ನು ಅಭಿವೃದ್ಧಿಪಡಿಸಲು ನಿಡಲ್ ಫ್ರೀ ಟೆಕ್ನಾಲಜೀಸ್ ಕಂಪನಿಯು ಸಿದ್ಧತೆ ನಡೆಸಿದೆ.
ಈ ಪ್ರಯತ್ನಕ್ಕಾಗಿ ಕಂಪನಿಯು 225 ರಿಂದ 250 ದಶಲಕ್ಷ ಡಾಲರ್ ಸಂಗ್ರಹಿಸಲು ಯೋಜನೆ ಸಿದ್ಧಪಡಿಸಿದೆ. ಒಟ್ಟಿನಲ್ಲಿ ಮಧುಮೇಹ ರೋಗಿಗಳ ಇನ್ಸುಲಿನ್ ಹಿಂಸೆಗೆ ಮುಕ್ತಿ ಸಿಗುವ ಭರವಸೆ ಮೂಡಿದ್ದು, ಮಧುಮೇಹಿಗಳು ಇದೊಂತರಾ ಶುಗರ್ ಲೆಸ್ ಸ್ವೀಟ್ ನ್ಯೂಸ್ ಅಂತಿದ್ದಾರೆ.