ISRO new chief Rocket Scientist S Somanathan: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಸೋಮನಾಥ್ ನೂತನ ಸಾರಥಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ ISRO) ನೂತನ ಅಧ್ಯಕ್ಷರಾಗಿ ರಾಕೆಟ್ ತಂತ್ರಜ್ಞಾನದ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ (Rocket Scientist S Somanathan) ನೇಮಕ ಆಗಿದ್ದಾರೆ. ಅವರು ಪ್ರಸ್ತುತ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್‌ಸಿ)ದ ನಿರ್ದೇಶರಾಗಿದ್ದಾರೆ. ಇಸ್ರೊ ಹಾಲಿ ಅಧ್ಯಕ್ಷ ಕೆ. ಶಿವನ್ ಅವರ ಅಧಿಕಾರಾವಧಿ ಜ.14ಕ್ಕೆ ಮುಗಿಯಲಿದೆ. ಶಿವನ್ ಅವರಿಗೆ ಒಂದು ವರ್ಷ ಸೇವಾ ವಿಸ್ತರಣೆಯನ್ನು ಸರ್ಕಾರ ನೀಡಿತ್ತು.

‘ಇದು ಗುರುತರಹದ ಹೊಣೆಗಾರಿಕೆ. ದೇಶದಲ್ಲಿ ಬಾಹ್ಯಾಕಾಶ ಉದ್ಯಮ ವಿಸ್ತರಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕಿದೆ. ಬಾಹ್ಯಾಕಾಶ ಇಲಾಖೆ, ಇಸ್ರೊ, ಇನ್-ಸ್ಪೇಸ್, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೈಗಾರಿಕೆಗಳು, ಸ್ಟಾರ್ಟಪ್ಗಳ ಪರಿಶ್ರಮವನ್ನು ಬಳಸಿಕೊಂಡು ದೇಶದ ಬಾಹ್ಯಾಕಾಶ ಕಾರ್ಯಕ್ರಮವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕಿದೆ’ ಎಂದು ಸೋಮನಾಥ್ ತಿಳಿಸಿದ್ದಾರೆ.

ಕೇರಳ ಮೂಲದವರಾದ ಸೋಮನಾಥ್, ಕೊಲ್ಲಂನ ಟಿಕೆಎಂ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡಿದರು. ನಂತರ ಬೆಂಗಳೂರಿನ ಐಐಸ್ಸಿಯಲ್ಲಿ ಏರೋಸ್ಪೇಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಸ್ಟ್ರಕ್ಚರ್ಸ್, ಡೈನಾಮಿಕ್ಸ್ ಮತ್ತು ಕಂಟ್ರೋಲ್ ವಿಷಯದಲ್ಲಿ ವಿಶೇಷ ಅಧ್ಯಯನ ಮಾಡಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾದರು. ವಿಎಸ್ಎಸ್ಸಿಗೆ 1985ರಲ್ಲಿ ಸೇರಿದ ಅವರು, ಪಿಎಸ್ಎಲ್ವಿಯ ವಿವಿಧ ಶ್ರೇಣಿಯ ರಾಕೆಟ್ ಅಭಿವೃದ್ಧಿಪಡಿಸಿದ ತಂಡವನ್ನು ಮುನ್ನಡೆಸಿದ್ದರು. ನಂತರ ಈ ಅಭಿವೃದ್ಧಿ ವಿಭಾಗದ ಯೋಜನಾ ವ್ಯವಸ್ಥಾಪಕರಾಗಿ, ರಾಕೆಟ್ ತಂತ್ರಜ್ಞಾನದಲ್ಲಿ ನಿಷ್ಣಾತರಾದರು. 2003ರಲ್ಲಿ ರೂಪುಗೊಂಡ ಜಿಎಸ್ಎಲ್ವಿ ಎಂಕೆ-3 ಯೋಜನೆಯಲ್ಲಿ ಉಪನಿರ್ದೇಶಕರಾಗಿದ್ದರು. ಈ ಶಕ್ತಿಶಾಲಿ ರಾಕೆಟ್ ಸಿದ್ಧವಾಗುವಷ್ಟರಲ್ಲಿ ಅವರು ನಿರ್ದೇಶಕರಾದರು. ಈ ರಾಕೆಟ್ ಅನ್ನು 2014ರ ಡಿ. 18ರಂದು ಮೊದಲ ಬಾರಿಗೆ ಉಡಾವಣೆ ಮಾಡಿದಾಗ ಅದರ ಮಾರ್ಗದರ್ಶಕರಾಗಿದ್ದರು.

ಉಡಾವಣಾ ವಾಹಕಗಳ ವಿನ್ಯಾಸದಲ್ಲಿ ಸೋಮನಾಥ್ ನಿಷ್ಣಾತರಾಗಿದ್ದು, ಅವರ ಕೊಡುಗೆಗಳು ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ ಎಂಕೆ-2ರಲ್ಲಿ ಕಾಣಬಹುದಾಗಿದೆ. ನೋದಕ ಹಂತ ವಿನ್ಯಾಸ, ಸ್ಟ್ರಕ್ಚರಲ್, ಡೈನಾಮಿಕ್ ವಿನ್ಯಾಸಗಳು, ರಾಕೆಟ್ ಮತ್ತು ಉಪಗ್ರಹ ಪ್ರತ್ಯೇಕಗೊಳಿಸುವಿಕೆ, ರಾಕೆಟ್ ಸಮಗ್ರ ವಿನ್ಯಾಸಗಳಲ್ಲಿ ಸೋಮನಾಥ್ ಕಾಣಿಕೆ ಎದ್ದು ಕಾಣುತ್ತದೆ ಎಂದು ವಿಎಸ್ಎಸ್ಸಿ ಹೇಳಿದೆ. ಎಲ್ಪಿಎಸ್ಸಿ ತಂಡವನ್ನು ಕಟ್ಟುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಿಇ20 ಕ್ರಯೋಜೆನಿಕ್ ಎಂಜಿನ್ ಮತ್ತು ಸಿ25 ಹಂತದ ಎಂಜಿನ್ಗಳ ಅಭಿವೃದ್ದಿಗೂ ಅವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: WiFi Router: ವೈಫೈ ರೂಟರ್‌ ನಿರ್ವಹಣೆ ಹೇಗೆ :ಇಲ್ಲಿದೆ ಕೆಲವು ಟಿಪ್ಸ್‌

(ISRO new chief Rocket Scientist S Somanathan appointed)

Comments are closed.