ಆರಾಧ್ಯ ಗಾನದೇವತೆಯೇ ಮತ್ತೊಮ್ಮೆ ನಮಗಾಗಿ ಹುಟ್ಟಿ ಬರುವಿರಾ…

ಪ್ರಸಾದ್ ಮೊಗೆಬೆಟ್ಟು

‘ಕಾಳಿಂಗ’- ಎಂಬ ಹೆಸರಲ್ಲೇ ಒಂದು ಗಾಂಭೀರ್ಯ ಇದೆಯಲ್ಲ? ಆ ಹೆಸರಿಗೆ ತಕ್ಕಂತೆ ಕೊರಳೊಳಗಿನ ಕಲಕಂಠಕ್ಕೂ ಗಾಂಭೀರ್ಯ- ಮಾಧುರ್ಯ ಮಿಳಿತ ವಾಗಿ ಮಾಂತ್ರಿಕ ಶಕ್ತಿ ಯಾದದ್ದು ಸಟೆಯಲ್ಲ ವಲ್ಲ. ಕಾಳಿಂಗ ಎಂಬ ಹೆಸರಿನ ಭಾಗವತರೂ ಹುಟ್ಟಿಲ್ಲ! ಸ್ವರವೂ ಹುಟ್ಟಿಲ್ಲ! ಯಕ್ಷಗಾನಕ್ಕೊಬ್ಬರೆ ಕಾಳಿಂಗ ನಾವಡರು.

ಹದಿಮೂರಕ್ಕೆ ಕಲಾಕಲಿಕೆ, ಹದಿನಾಲ್ಕಕ್ಕೆ ಸಂಗೀತಗಾರಿಕೆ, ಹದಿನೈದಕ್ಕೆ ಗುರುಗಳೊಂದಿಗೆ ಗುರುತನ, ಹದಿನಾರಕ್ಕೆ ಸಹ ಭಾಗವತಿಕೆ, ಹತ್ತೊಂಬತ್ತಕ್ಕೆ ಪ್ರಧಾನ ಭಾಗವತಿಕೆ, ಇಪ್ಪತ್ತೊಂದಕ್ಕೆ ಪ್ರಸಂಗರಚನೆ, ಮೂವತ್ತೆರಡಕ್ಕೆ ಜೀವನರಂಗದಿಂದ ನಿರ್ಗಮನ. ಇದೆಲ್ಲಾ ಮಾನುಷ ಮಾತ್ರರಿಂದ ಖಂಡಿತಾ ಅಸಾಧ್ಯ. ಕೆಲವು ಕಾಲವಷ್ಟೇ ಭುವನದಲ್ಲಿದ್ದು ಹೋಗುವುದಕ್ಕೆ ಬಂದ ಗಂಧರ್ವ ದೇವತೆಗಷ್ಟೇ ಇದು ಸಾಧ್ಯ.

ಕಾಳಿಂಗ ನಾವಡರನ್ನು ರಂಗಸ್ಥಳ ದಲ್ಲಿ ಕಂಡದ್ದು ಪ್ರಾಥಮಿಕ ಶಾಲೆ ಓದುತ್ತಿದ್ದಾಗ. ಎರಡು- ಮೂರು ಬಾರಿ. ಆಗ ಅವರು ನಾವಡರು ಎಂಬುದೇ ಗೊತ್ತಿರಲಿಲ್ಲ ! ಅವರು ಕಾಲಗರ್ಭ ಸೇರಿದಾಗ ಮತ್ತೆ ಆ ನೆನಪು ಹಸಿಯಾಯಿತು. ಹೋ.. ನಾನು ಅವತ್ತು ಕಂಡದ್ದು ಇವರನ್ನೆ ಅಲ್ಲವೆ. ಅಯ್ಯೋ ನಾನು ಇನ್ನಷ್ಟು ಮೊದಲೇ ಹುಟ್ಟಿದ್ದರೆ ಅವರನ್ನು ಅರ್ಥವಿಸಿ ಕಾಣಬಹುದಿತ್ತು, ಅವರು ನಮ್ಮಿಂದ ಮರೆಯಾಗ ಬಾರದಿತ್ತು. ಅಂದುಕೊಂಡದ್ದು ಸತ್ಯ.

ನಾನು ಎಳವೆಯಿಂದಲೇ ಕಾಳಿಂಗ ನಾವಡರ ಯಕ್ಷಗಾನ ಆಡಿಯೋ ಕೇಳುತ್ತಲೇ ಆಟವಾಡಿದವನು. ಕಲೆ ನನಗೆ ರಕ್ತಗತ ಬಳುವಳಿ ಯಾದರೂ ಈ ರಂಗಕ್ಕೆ ಬರುವುದಕ್ಕೆ ಅವರ ಪದ್ಯಗಳೇ ಆಕರ್ಷಣೆ. ಯಕ್ಷಗಾನ ವನ್ನು ಬದುಕಾಗಿಸಿಕೊಂಡ ಮೇಲೆ ಅವರ ಗುಂಗಿನಿಂದ ಹೊರಬರಲಾಗಲಿಲ್ಲ. ಕಲಿಯುವಾಗಲೂ ಗುರುಗಳಲ್ಲಿ ಬೈಸಿಕೊಂಡದ್ದು ಇದೆಯಲ್ಲ; ನಿನ್.. ನಾವಡ್ರ ಶೈಲಿ ಬೇಡ, ನಿನ್ ಸ್ವರದಲ್ಲೆ ಬೊಗಳು..

ಮಂಗಳೂರು ಆಕಾಶವಾಣಿಯಲ್ಲಿ ಹಲವಾರು ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ನೀಡಿದ್ದೆ; ಅಲ್ಲಿಯೂ ನನ್ನ ಆಯ್ಕೆಯ ಪ್ರಸಂಗಗಳೆಂದರೆ ನಾನು ಈ ಹಿಂದೆ ಕೇಳಿದ್ದ ನಾವಡರ ಧ್ವನಿಮುದ್ರಿಕೆಯ ಪ್ರಸಂಗಗಳೆ.

ದೆಹಲಿಯಲ್ಲಿ ಭಾಗವತಿಕೆಯ ಸ್ಕಾಲರ್ಶಿಪ್ ಇಂಟರ್ ವಿರ್ವ್ಯೂ. ಸಂದರ್ಶಕರು‌ ಕೆರೆಮನೆ ಶಂಭು ಹೆಗಡೆ ಅವರು. ನೀನು ಯಾರ ಶಿಷ್ಯ?- ಕೇಳಿದರು. ಗೋರ್ಪಾಡಿಯವರ ಶಿಷ್ಯ’- ಹೆಮ್ಮೆಯಿಂದ ಹೇಳಿದೆ.
ಒಂದು ಪದ್ಯ ಹೇಳು ಅಂದರು; ಹಾಡಿದೆ. ಇನ್ನೊಂದು ಹಾಡು ಅಂದರು ಹಾಡಿದೆ.’ ನಿನ್ನನ್ನು ನೋಡಿದರೆ ನಾವಡರ‌ ಶಿಷ್ಯ ನ ಹಾಗೆ ಕಾಣ್ತದೆ’ ಎಂದು ಅವರು ನಗಾಡಿದರು. ನಾನು ಇಂಟರ್ ವ್ಯೂ ಪೈಲ್ ಎಂದು ಕೊಂಡು ಆತಂಕಿತನಾದೆ. ನಾವಡರ ಸ್ಮರಣೆಯಲ್ಲಿ ಸಂದರ್ಶನದಲ್ಲಿ ನಾನು ಉತ್ತೀರ್ಣನಾಗಿದ್ದೆ. ಈಗಲೂ ಗೆಳೆಯ ಮಂಜುನಾಥ ಕುಲಾಲ ಐರೋಡಿ ಈ ಸಂದರ್ಭಕ್ಕೆ ಸಾಕ್ಷಿ.

https://kannada.newsnext.live/ashika-ranganath-milkybeacty-busy-working-mango-plant-lockdown-farmhouse/amp/

ನಾವಡರು ಆವರಿಸುತ್ತಲೇ ಹೋದರು. ರಮೇಶ್ ಬೇಗಾರರು ‘ಕಾಳಿಂಗ ನಾವಡ ಪ್ರಶಸ್ತಿ’ಯನ್ನೂ ನೀಡಿ ಗೌರವಿಸಿದರು. ಎಲ್ಲಾ ‌ಸಂದರ್ಭದಲ್ಲೂ ಮನಸ್ಸಿಗೆ ಬರುವ ಯೋಚನೆ‌ ಒಂದೇ: ಅವರು ಇರಬೇಕಿತ್ತು.

Comments are closed.